ಚೀನೀ ಕಲೆ

ಕ್ರಿಸ್ತಪೂರ್ವ 3000 ವರ್ಷಗಳಷ್ಟು ಹಿಂದೆಯೇ, ಎಂದರೆ ನವಶಿಲಾಯುಗದಲ್ಲಿಯೇ, ಚೀನೀಕಲೆ ಮಣ್ಣಿನ ಗಡಿಗೆ, ಅಸ್ಥಿಕಳಸ, ಮುಂತಾದ ದಿನಂಪ್ರತಿ ಬಳಸುವ ಪಾತ್ರೆಗಳಲ್ಲಿ ಅಭಿವ್ಯಕ್ತವಾಯಿತು, ಎಂದು ಆಂಡರ್‍ಸನ್ ಮುಂತಾದ ಪುರಾತತ್ವ ಸಂಶೋಧಕರ ಶ್ರಮದಿಂದಾಗಿ ತಿಳಿದುಬಂದಿದೆ. ಇದೇ ಸುಮಾರಿನಲ್ಲೇ ಮೂಳೆಯಲ್ಲಿ ಕೊರೆದು ಮಾಡಿದ ಪುತ್ಥಳಿಗಳು ರೂಪತಳೆದುವು. ಈ ಕಲಾಪ್ರವೃತ್ತಿ ಕ್ರಿಸ್ತಪೂರ್ವ 1558ರ ಸುಮಾರಿಗೆ ಆರಂಭವಾದ ಷಾಂಗ್-ಇನ್ ಯುಗದಲ್ಲಿ ವಿಸ್ತøತವಾಯಿತು. ಲೋಹಪ್ರತಿಮೆಗಳು. ತತ್ರಾಪಿ ಹಿತ್ತಾಳೆಯಲ್ಲಿ ಎರಕ ಹೊಯ್ದು ಮಾಡಿದ ಪ್ರತಿಮೆಗಳು ಈ ಯುಗದಲ್ಲಿ ಮೂಡಿಬಂದವು. ಷಾಂಗ್ ಯುಗದ ಪಾತ್ರೆಗಳೂ ಪ್ರತಿಮೆಗಳೂ ಪ್ರಸಿದ್ಧವಾಗಿವೆ. ಈ ಪಾತ್ರೆಗಳ ಮೇಲೆ ಅಲಂಕಾರದ ಕೆತ್ತನೆ ಮತ್ತು ಕೊರೆತಗಳ ವಿನ್ಯಾಸಗಳಿವೆ. ಇವಲ್ಲದೆ ಹಾಲುಗಲ್ಲಿನಲ್ಲಿ ಕಡೆದ ಮೂರ್ತಿಗಳೂ ಈ ಯುಗದ ವೈಶಿಷ್ಟ್ಯ. ನೆಫ್ರೈಟ್ ಲೋಹಾಂಶ ಅಧಿಕವಾಗಿರುವ ಜೇಡ್ (ಚೀನೀ ಭಾಷೆಯಲ್ಲಿ ಯ್ಯುಯ್) ವಸ್ತುವಿನಲ್ಲಿ ಕೊರೆದು ಬಿಡಿಸಿದ ಕಲಾಕೃತಿಗಳು ಇಷ್ಟು ಪ್ರಾಚೀನಯುಗದಿಂದಲೇ ಪ್ರಖ್ಯಾತವಾಗಿವೆ. ಕ್ರಿ. ಪೂ. 1027ರಿಂದ ಕ್ರಿ.ಪೂ. 221ರ ವರೆಗೆ ಪ್ರವೃತ್ತವಾಗಿದ್ದ ಚೌ ರಾಜವಂಶದ ಯುಗದಲ್ಲಿ ಈ ಕಲಾಪ್ರಕಾರಗಳು ಇನ್ನಷ್ಟು ವಿಕಾಸಗೊಂಡುವು. ಧಾರ್ಮಿಕ ಪ್ರಯೋಜನಗಳಿಗಾಗಿ ಪೂಜಾಸಾಮಾನುಗಳು ಕಲಾವಿಶಿಷ್ಟವಾಗಿ ಹಿತ್ತಾಳೆಯಲ್ಲಿ ಬಹುವಾಗಿ ಬಂದುವು. ಬಿಳಿಜೇಡಿಮಣ್ಣು (ಸೆರಾಮಿಕ್) ಕಲೆಗಾಗಿಯೂ ನಿತ್ಯೋಪಯೋಗದ ಪರಿಕರಗಳನ್ನು ಸಿದ್ಧ ಮಾಡುವುದಕ್ಕಾಗಿಯೂ ಹೆಚ್ಚು ಹೆಚ್ಚಾಗಿ ಬಳಕೆಗೆ ಬಂದಿತು. ಯಾವನೊಬ್ಬ ಗಣ್ಯವ್ಯಕ್ತಿ ತೀರಿಕೊಂಡರೆ ಅವನ ಸಮಾಧಿಯ ಸ್ಥಳದಲ್ಲಿ ನಿಲ್ಲಿಸಲು ಕಲ್ಲಿನ ವಿಗ್ರಹಗಳನ್ನು ಕಡೆಯುವುದು ಆರಂಭವಾಯಿತು. ಚೀನೀ ಭಾಷೆಯಲ್ಲಿ ಈ ಸಮಾಧಿ ವಿಗ್ರಹಗಳಿಗೆ ಯೂಂಗ್ ಎನ್ನುತ್ತಾರೆ. ಹೋನ್ಯಾನ್ ಜಿಲ್ಲೆಯಲ್ಲಿ, ಕೈಗಳೆರಡನ್ನೂ ಎದೆಯ ಮೇಲೆ ಇಟ್ಟುಕೊಂಡ ಇಂಥ ಸ್ಥಾನಕಮೂರ್ತಿಗಳ ಅವಶೇಷಗಳು ಬಹುವಾಗಿ ಇವೆ. ಛಾಂಗ್-ಶ ಎಂಬಲ್ಲಿ ಅತ್ಯಂತ ಪ್ರಾಚೀನವಾದ ಕುಂಚ ದೊರೆತಿದ್ದು ಇದು ಚೌ ಯುಗದ್ದೆಂದು ನಿರ್ಣಯವಾಗಿದೆ. ಇದೇ ಪ್ರದೇಶದಲ್ಲಿಯೇ ಜೆನ್-ಫಿಯು-ತ-ಶನ್ ಎಂಬ ಸಮಾಧಿಯಲ್ಲಿ ವರ್ಣಚಿತ್ರಗಳನ್ನು ಮೂಡಿಸಿದ್ದ ರೇಷ್ಮೆ ವಸ್ತ್ರದ ತುಂಡೂ ದೊರೆತಿತು. ಭೂತಗಳಿಂದ ಸುತ್ತಲ್ಪಟ್ಟ ಹೆಂಗಸೊಬ್ಬಳ ಚಿತ್ರ ಇಲ್ಲಿದೆ. ಇದೇ ಚೀನೀ ವರ್ಣಚಿತ್ರಕಲೆಯ ಅತಿ ಪ್ರಾಚೀನ ಉಲ್ಲೇಖವೆನ್ನುತ್ತಾರೆ.

ಹಾನ್‍ಯುಗ (ಕ್ರಿ.ಪೂ. 206ರಿಂದ ಕ್ರಿ.ಶ. 221) ಕಲೆಯ ದೃಷ್ಟಿಯಿಂದ ಪ್ರಮುಖವಾದುದು. ಊರ ಹೊರಗಿನ ಸಮಾಧಿಪ್ರದೇಶಕ್ಕೆ ಹೋಗುವ ದಾರಿಯ ಇಕ್ಕೆಲಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಪ್ರಾಣಿಗಳ, ಮನುಷ್ಯರ ಶಿಲಾಮೂರ್ತಿಗಳನ್ನು ನಿಲ್ಲಿಸುವ ಸಂಪ್ರದಾಯ ಈ ಯುಗದ್ದು. ಶ್ಮಶಾನಮಾರ್ಗಕ್ಕೆ ಚೀನೀ ಭಾಷೆಯಲ್ಲಿ ಶೆನ್-ತಯೋ ಎಂಬ ಹೆಸರಿರುವುದರಿಂದ ಈ ಮೂರ್ತಿಗಳಿಗೂ ಇದೇ ಹೆಸರು ಬಳಕೆಯಲ್ಲಿ ಬಂತು. ಈ ಬೃಹನ್ಮೂರ್ತಿಗಳಲ್ಲದೆ, ಸಮಾಧಿಯ ಒಳಗೆ ಪ್ರೇತದ ಪ್ರಯೋಜನಕ್ಕೆಂದು ಇಡಲು ಪಾತ್ರೆ, ಆಟದ ಸಾಮಾನು, ನಿತ್ಯದ ಪರಿಕರಗಳು, ಸ್ತ್ರೀಪುರುಷಮೂರ್ತಿಗಳು ಸಣ್ಣ ಸಣ್ಣ ಪ್ರಮಾಣದಲ್ಲಿ ಸಿದ್ಧವಾದುವು. ಈ ಯುಗದಲ್ಲಿ ಮೈದಳೆದು ಬಂದ ಪ್ರಾಣಿಗಳ ಮೂರ್ತಿಗಳು ತುಂಬ ಸಹಜವಾಗಿದ್ದು ಅದ್ಭುತಕಲಾಕೃತಿಗಳೆಂದು ಪರಿಗಣಿತವಾಗಿವೆ. ಸಮಾಧಿಮಂಟಪಗಳ ಮೇಲ್ಚಾವಣಿಯ ಹಲಗೆಗಳ ಮೇಲೆ ದಿನದಿನದ ಪ್ರಸಂಗಗಳನ್ನು ತುಂಬ ನೈಜವಾಗಿ ಬಿಡಿಸುವ ಪದ್ಧತಿಯಿತ್ತು. ಜೇಡಿಮಣ್ಣಿನ ಮೇಲೆ ಮುದ್ರೆಯೊತ್ತಿ ಮಾಡಿದ ಕಲಾಕೃತಿಗಳೂ ಈ ಕಾಲದವೇ. ದೇವಾಲಯಗಳ ಪ್ರಾಂಗಣಗಳಲ್ಲಿ ನಿಲ್ಲಿಸಿರುವ ಶಿಲಾ ಫಲಕಗಳ ಮೇಲೆ ಉಬ್ಬುಚಿತ್ರಗಳನ್ನು ಮೂಡಿಸುತ್ತಿದ್ದರು. ಇವೆಲ್ಲ ಸ್ಮಾರಕ ಶಿಲಾಫಲಕಗಳೆಂದು ಪ್ರಸಿದ್ಧವಾಗಿವೆ. ಐತಿಹಾಸಿಕ ಘಟನೆಗಳೂ ಪೌರಾಣಿಕ ಕಥೆಗಳೂ ನಿರೂಪಿತವಾಗಿದೆ. ತಾಓ ಪಂಥ, ಕುಂಗ್-ಫು-ತ್ಸೆಯ ಬೋಧನೆಗಳು ಈ ಯುಗದಲ್ಲಿ ಕಲೆಯ ಮೇಲೆ ತುಂಬ ಪ್ರಭಾವವನ್ನು ಬೀರಿದುವು.

ಹೆನ್ ವು-ಟಿ (140-87 ಕ್ರಿ.ಪೂ) ಎಂಬ ಚಕ್ರವರ್ತಿಯ ಕಾಲದಲ್ಲಿ ಹಿತ್ತಾಳೆಯ ಹಲಗೆಯ ಮೇಲೆ ಮೂಡಿಸಿದ ಕನ್ನಡಿಗಳು ಬಳಕೆಗೆ ಬಂದುವು. ಕನ್ನಡಿಯ ಹಿಂಬಾಗದ ಹಿತ್ತಾಳೆಯ ಪಟ್ಟಿಯ ಮೇಲೆ ನಾಜೂಕಾದ ಕಲಾಕೃತಿಗಳನ್ನು ಅಳವಡಿಸುವ ಪರಿಪಾಠವೂ ಬಂತು. ಬಿಳಿ ಹುಲಿ, ನೀಲಿ ನಾಗದೈತ್ಯ (ಡ್ರೇಗನ್) ಇವುಗಳ ಚಿತ್ರಣ ತುಂಬ ಜನಪ್ರಿಯವಾದ ವಸ್ತುಗಳಾಗಿದ್ದುವು. ತಾಓ ಪಂಥದ ದೇವತೆಗಳೂ (ಪೂರ್ವದಿಕ್ಕಿನ ರಾಜ ತುಂಗ್-ವಾಂಗ್-ಕುಂಗ್, ಪಶ್ಚಿಮ ದಿಗ್ಭಾಗದ ರಾಣಿ ಹ್ಸಿ-ವಾಂಗ್-ಮು ಮುಂತಾದವರು) ಕನ್ನಡಿಯ ಹಿಂದೆ ಮೂಡಿಬಂದುವು. ಛು ಪ್ರಾಂತ್ಯದಲ್ಲಿ ಲಾಕ್ಷಾಕೃತಿಗಳು ಪ್ರಸಿದ್ಧವಾಗಿದ್ದುವು. ಕ್ರಿ. ಶ. 220 ರಿಂದ 589ರವರೆಗೆ ಚೀನದಲ್ಲಿ ಮೂರು ರಾಜ್ಯಗಳೂ ಆರು ರಾಜವಂಶಗಳೂ ಆಗಿಹೋದುವು. ಈ ಯುಗವನ್ನು ಆರು ರಾಜವಂಶಗಳ ಯುಗವೆಂದೇ ವ್ಯವಹರಿಸುತ್ತಾರೆ. ಆದರೂ ಈ ಯುಗದಲ್ಲಿ ಇಡೀ ಚೀನದೇಶ ಒಂದು ಆಡಳಿತಕ್ಕೆ ಬಂತು. ಸಾಮಾಜಿಕವಾಗಿ ರಾಜಕೀಯ ವ್ಯವಸ್ಥೆಯಲ್ಲಿ ತುಂಬ ಪ್ರಕ್ಷುಬ್ಧ ಪರಿಸ್ಥಿತಿಯಿದ್ದರೂ ಈ ಅವಧಿಯಲ್ಲಿ ಕಲೆ ಉಚ್ಛ್ರಾಯಸ್ಥಿತಿಯನ್ನು ಮುಟ್ಟಿತು. ಈ ಯುಗದಲ್ಲಿಯೇ ಬೌದ್ಧಧರ್ಮ ಚೀನದಲ್ಲಿ ಬೇರೂರಿತು. ಮಧ್ಯ ಏಷ್ಯದ ಕಾಲುದಾರಿಯಾದ ಈ ದೇಶವನ್ನು ಮುಟ್ಟಿದ ಬೌದ್ಧಧರ್ಮ ಆ ಪ್ರದೇಶದ ಕಲೆಯನ್ನೂ ತಂದಿತು. ಕ್ರಿ.ಶ. ಎರಡನೆಯ ಶತಮಾನದ ವೇಳೆಗಾಗಲೇ ಬೌದ್ಧಧರ್ಮ ಇಲ್ಲಿ ನೆಲೆಗೊಂಡಿತ್ತು. ಮಧ್ಯ ಏಷ್ಯ ಕಲೆಯ ಪ್ರಭಾವ ಭಾರತೀಯ ಕಲೆಯ ಪ್ರಭಾವಕ್ಕಿಂತ ಹೆಚ್ಚು ಸಮರ್ಥವಾಗಿತ್ತು. ಬೌದ್ಧಧರ್ಮ ಭಾರತೀಯವಾದುದಾದರೂ ಚೀನೀ ಭಾಷೆಗೆ ಪರಿವರ್ತಿತವಾದ ಗ್ರಂಥಗಳು ಸಂಸ್ಕøತ ಮೂಲದಲ್ಲಿದ್ದರೂ ಭಾರತಕಲೆಯ ಪ್ರಭಾವ ಅಷ್ಟಾಗಿ ಚೀನೀ ಕಲೆಯ ಮೇಲೆ ಬೀಳಲಿಲ್ಲ. ಏಕೆಂದರೆ ಆ ವೇಳೆಗಾಗಲೇ ಚೀನೀಕಲೆಯ ಪ್ರಕಾರಗಳು ಸ್ಪಷ್ಟವಾಗಿ ಮೈದಳೆದಿದ್ದುವು. ಕಲೆಯ ವಸ್ತುಗಳು ಭಾರತೀಯವಾದರೂ ಕಲಾಶೈಲಿ ಚೀನೀ ಆಗಿಯೇ ಉಳಿಯಿತು. ಮಧ್ಯ ಏಷ್ಯ ಕಲೆಗೂ ಚೀನೀಕಲೆಗೂ ಮೊದಲಿನಿಂದ ಬಾಂಧವ್ಯವಿದ್ದುದು ಮಾತ್ರವಲ್ಲದೆ ಎರಡರ ಮೂಲಭೂತಕಲ್ಪನೆಗಳೂ ಒಂದೇ ಆಗಿದ್ದುವು.
ಮೂರು ನಾಲ್ಕನೆಯ ಶತಮಾನಗಳಲ್ಲಿ ಕನ್ನಡಿಗಳ ಹಿಂದೆ ಬುದ್ಧ, ಅಪ್ಸರೆಯರು ಮೈತ್ರೇಯ ಬೋಧಿಸತ್ತ್ವ-ಇವರ ಚಿತ್ರಣವೇ ಬೌದ್ಧ ಚೀನೀಕಲೆಯ ಆರಂಭದೆಶೆಯ ನಿದರ್ಶನಗಳು. ಅದಕ್ಕೆ ಮುಂಚೆ ಪ್ರಚಲಿತವಾಗಿದ್ದ ತಾಓ ಪಂಥದ ಸನ್ನಿವೇಶವನ್ನೇ ಬೌದ್ಧಚಿತ್ರಗಳಿಗೆ ಅಳವಡಿಸಿದುದು ಕಾಣಬರುತ್ತದೆ. ಮೆರಗುಹಾಕಿದ ಹಿತ್ತಾಳೆ ವಿಗ್ರಹಗಳೂ ಶಿಲಾವಿಗ್ರಹಗಳೂ ಬುದ್ಧಬೋಧಿಸತ್ತ್ವರನ್ನು ಪ್ರತಿಬಿಂಬಿಸಿ ರೂಪ ತಳೆದುವು. ಕ್ರಿ. ಶ. 300 ರಿಂದ 501ರ ವರೆಗೆ ಮಾಡಿದ ಐವತ್ತೈದು ವಿಗ್ರಹಗಳು ಇಂದಿಗೂ ಉಳಿದಿವೆ. ಐದು-ಆರನೆಯ ಶತಮಾನಗಳಲ್ಲಿ ಚೀನೀ ಗುಹಾಂತರ್ದೇವಾಲಯಗಳು ನಿರ್ಮಿತವಾದುವು. ಉತ್ತರ ಚೀನದಲ್ಲಿ ತುನ್‍ಹು ಆಂಗ್‍ನಿಂದ ಮಂಚೂರಿಯದವರೆಗೂ ಇಂಥ ಗುಹದೇಗುಲಗಳು ಬೆಳೆದುವು. ಇಂಥ ವಿಹಾರ-ದೇಗುಲದಲ್ಲಿ ಮೂಡಿಬಂದ ಕಲೆ ಬಾರತೀಯ ಗುಹಾಂತರ್ದೇವಾಲಯಗಳ (ಅಜಂತ, ಬಾಗ್ ಮುಂತಾದ) ಕಲಾಪದ್ಧತಿಯನ್ನು ಅವಲಂಬಿಸಿ ನಿಂತಿದೆಯೆಂಬುದು ವ್ಯಕ್ತವಾಗುತ್ತದೆ. ಭಾರತೀಯ ಚೈತ್ಯಗಳ, ಸ್ತೂಪಗಳ ಮಾದರಿಯನ್ನು ಅನುಸರಿಸಿರುವುದೂ ಸ್ಪಷ್ಟವಾಗಿದೆ. ಈ ಗುಹಾದೇವಾಲಯಗಳಲ್ಲಿ ಬೃಹತ್ಪ್ರಮಾಣದ ಬುದ್ಧಮೂರ್ತಿಗಳನ್ನೂ ಬಂಡೆಗಳ ಮೆಲೆ ಬುದ್ಧಬೋಧಿಸತ್ತ್ವರ ಜೀವನ ಪ್ರಸಂಗಗಳನ್ನೂ ಕಡೆಯುವ ವಾಡಿಕೆ ಇತ್ತು. ಇಲ್ಲಿ ಗಾಂಧಾರಶೈಲಿಯ ಅಥವಾ ಗುಪ್ತ ಶೈಲಿಯ ಸಂವಿಧಾನಗಳನ್ನು ಬಳಸಿಲ್ಲ. ಮಧ್ಯ ಏಷ್ಯದ ಕಿಸಿಲ್ ಮುಂತಾದೆಡೆ ಇರುವ ಶಿಲ್ಪಗಳ ಶೈಲಿಯನ್ನು ಅನುಸರಿಸಿದ್ದಾರೆ. ಚೀನೀ ಬೌದ್ಧಕಲೆ ಚೀನೀಕಲೆಯ ಒಂದು ಪ್ರಕಾರವಾಗಿಯೇ ಉಳಿಯಿತು. ಅವಲೋಕಿತೇಶ್ವರ, ಮಂಜುಶ್ರೀ, ಪ್ರಭೂತ ರತ್ನ ಮುಂತಾದ ಬೋಧಿಸತ್ತ್ವರ ಶಿಲ್ಪಗಳನ್ನು ನೋಡಿದರೆ ಅವರು ಚೀನೀ ವ್ಯಕ್ತಿಗಳಂತೆಯೇ ಕಾಣುತ್ತಾರೆ; ಚೀನೀ ಮೈಕಟ್ಟು, ಚೀನೀ ಮುಖಚಹರೆ, ಚೀನೀ ಉಡಿಗೆ, ಚೀನೀ ನಿಲುವು; ಮೂಲ ಕಲ್ಪನೆ ಮಾತ್ರ ಭಾರತೀಯ; ಅಭಿವ್ಯಕ್ತಿಯೇನೋ ಚೀನೀ.

ಕ್ರಿ. ಶ. 580ರ ಸುಮಾರಿಗೆ ಹೊಪೈ ಪ್ರದೇಶದಲ್ಲಿ ಬೌದ್ಧಧರ್ಮ ಮತ್ತೊಂದು ವಿಶಿಷ್ಟವಾದ ಕಲಾಪದ್ಧತಿಯನ್ನು ಆರಂಭಿಸಿತು. ತಿಂಗ್-ಚೌ ಮತ್ತು ಪವೋಟಿಂಗ್ ಎಂಬ ಊರುಗಳಲ್ಲಿ ದೊರಕುತ್ತಿದ್ದ ಮಿರುಗುವ ಹಾಲುಗಲ್ಲನ್ನು ಉಪಯೋಗಿಸಿ ಮೂರ್ತಿಗಳನ್ನು ಕಡೆದು ನಿಲ್ಲಿಸುವ ಪದ್ಧತಿ ಇಲ್ಲಿ ಆರಂಭವಾಯಿತು. ಈಗ ಲಂಡನ್ ನಗರದ ಬ್ರಿಟಿಷ್ ಮ್ಯೂಸಿಯಂನಲ್ಲಿ ನಿಕ್ಷೇಪ ಮಾಡಿರುವ ಅಮಿತಾಭ ಬುದ್ಧನ ಪ್ರತಿಕೃತಿ ಈ ಕಾಲದ್ದು; ಅದು ಅದ್ಭುತ ಪ್ರಮಾಣದ ಶಿಲ್ಪ. ಆರನೆಯ ಶತಮಾನದ ಕಡೆಗಾಲದಲ್ಲಿ ಷಾಂಟೂಂಗ್ ಜಿಲ್ಲೆಯ ಕಲೆ ಪ್ರತಿಭಾಸಂಪನ್ನವಾಗಿ ಕಾಣಿಸಿಕೊಂಡಿತು. ಈ ಕಾಲದ ಸ್ಮಾರಕಗಳಾದ ತೋ-ಷಾನ್, ಯುಅನ್-ಮೇನ್-ಷಾನ್, ಯೂಯ್-ಹಾನ್ ಷಾನ್ ಶಿಲ್ಪಗಳು ವಿಶ್ವವಿಖ್ಯಾತವಾಗಿವೆ. ಈ ಕಲಾಕೃತಿಗಳಲ್ಲಿ ಗುಪ್ತಶೈಲಿಯ ಪ್ರಭಾವ ವ್ಯಕ್ತವಾಗುವುದು ಸ್ವಾರಸ್ಯವಾದ ವಿಚಾರ. ಈ ಯುಗದ ಅವಸಾನವಾಗುವ ವೇಳೆಗೆ ಕಲೆಗಾರನಿಗೆ ಸಮಾಜದಲ್ಲಿ ಗೌರವದ ಸ್ಥಾನ ಸಿದ್ಧವಾಗಿತ್ತು. ಕಲಾಕೃತಿಗಳನ್ನೂ ಕಲೆಗಾರರ ವ್ಯಕ್ತಿತ್ವ-ಪ್ರತಿಭೆ-ವೈಶಿಷ್ಟ್ಯಗಳನ್ನೂ ಅಧಿಕರಿಸಿ ಸಾಹಿತ್ಯವೂ ಮೈದಳೆಯಿತು. ಚೀನೀ ಚಿತ್ರಕಲೆಯ ವಿಚಾರವಾಗಿ ರಚಿತವಾದ ಗ್ರಂಥಗಳಲ್ಲಿ ಅತಿಪ್ರಾಚೀನವೆನಿಸಿದ ಕು-ಹುಯು-ಪಿ ಇನ್-ಲು (ಕಲೆಗಾರರ ವರ್ಗಣೆಯನ್ನು ಕುರಿತ ಪ್ರಾಚೀನ ನಿರೂಪಣೆ) ಎಂಬ ಗ್ರಂಥ ಈ ಯುಗದಲ್ಲಿ ಬಂತು. ಈ ಗ್ರಂಥವನ್ನು ಬರೆದ ಚೀ-ಹೊ ಎಂಬ ವಿದ್ವಾಂಸ ಐದನೆಯ ಶತಮಾನದ ಅಂತ್ಯ ಭಾಗದಲ್ಲಿ ಇದ್ದವು. ಈ ಗ್ರಂಥದಲ್ಲಿ ಚಿತ್ರಕಲೆಯ ಆರು ನಿಯಮ (ಷಡಂಗ) ಗಳನ್ನು ನಿದರ್ಶನಗಳೊಂದಿಗೆ ನಿರೂಪಿಸಿದ್ದಾನೆ. ಮುಂದಿನ ಚಿತ್ರಕಲಾವಿಕಾಸಕ್ಕೆ ಈ ಗ್ರಂಥ ಆಧಾರವಾಯಿತು. ಗುಹಾಂತರ್ದೇವಾಲಯಗಳ ಗೋಡೆಗಳ ಮೇಲೆ ವರ್ಣಚಿತ್ರಗಳನ್ನು ಬಿಡಿಸುವ ಪದ್ಧತಿಯಿಂದಲೇ ಸುವ್ಯವಸ್ಥಿತವಾದ ಚೀನೀ ವರ್ಣಚಿತ್ರಕಲೆ ಆರಂಭವಾಯಿತು. ಕ್ರಿ.ಶ. 345 ರಿಂದ 405ರ ವರೆಗೆ ಜೀವಿಸಿದ್ದ ಕು-ಕೈ-ಛಿ ಎಂಬ ಕಲಾವಿದನೇ ಚೀನೀ ಕಲಾವಿದರಲ್ಲಿ ಅತಿಪ್ರಾಚೀನ, ಅತಿ ಪ್ರಸಿದ್ಧ. ಮೇಲೆ ಹೇಳಿದ ಷೀ-ಹೊ ಈ ಕಲಾವಿದನ್ನು ತನ್ನ ಗ್ರಂಥದಲ್ಲಿ ಪ್ರಸ್ತಾಪಿಸಿದ್ದಾನೆ. ಕು-ಕೈ-ಛಿಯ ಕಲಾಕೃತಿಗಳನ್ನು ಮುಂದಿನ ನೂರಾರು ಕಲೆಗಾರರು ಪ್ರತಿಕೃತಿಗಳಲ್ಲಿ ಕಾಪಿಟ್ಟಿದ್ದಾರೆ. ಅವನ ಮೂಲ ಕೃತಿಗಳು ಇಂದು ಉಪಲಬ್ಧವಿಲ್ಲ. ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂನಲ್ಲಿಟ್ಟಿರುವ ಚಿತ್ರಸುರುಳಿ (ಸ್ಕ್ರಾಲ್) ಕು-ಕೈ-ಛಿಯ ಪ್ರಸಿದ್ಧ ಕೃತಿಗಳಲ್ಲಿ ಒಂದು. ಕುಂಚದಿಂದ ದೃಢವಾಗಿ ಮೃದುವಾಗಿ ಹೆಂಗಸರ ಜೀವನದಲ್ಲಿ ಒದಗುವ ಪ್ರಸಂಗಗಳನ್ನು ನಿರೂಪಿಸುವ ಈ ಚಿತ್ರದ ಪ್ರಮಾಣವೂ ಅದ್ಭುತವಾದುದು. ಈ ಕಲೆಗಾರ ನಿಸರ್ಗ ಚಿತ್ರಣದಲ್ಲಿಯೂ ಎತ್ತಿದ ಕೈ. ಇದೇ ಯುಗದ ಇನ್ನೊಬ್ಬ ಪ್ರಖ್ಯಾತ ಕಲೆಗಾರನೆಂದರೆ ಚಾಂಗ್-ಸೆಂಗ್-ಯು. ಇವನ ಚಿತ್ರಗಳು ಇಂದಿಗೂ ಉಳಿದುಬಂದಿವೆ.

ಮುಂದೆ ಎಂದರೆ ಕ್ರಿ.ಶ. 581 ರಿಂದ 906ರ ವರೆಗೆ ನೆಲೆಗೊಂಡಿದ್ದ ಸುಯ್ ಮತ್ತು ಟ ಆಂಗ್ ರಾಜವಂಶಗಳು ಕಲೆಗೆ ತುಂಬ ಪ್ರೋತ್ಸಾಹವನ್ನಿತ್ತವು. ಈ ಯುಗದಲ್ಲಿ ಮೂಡಿಬಂದ ಕಲಾಕೃತಿಗಳ ಪಟ್ಟಿಯನ್ನು ಆ ಯುಗದ ಬರಹಗಾರರೇ ಪಟ್ಟಿಮಾಡಿ ಉಳಿಸಿದ್ದಾರೆ. ಇಂಥ ಕಲಾಪಕ್ಷಪಾತಿ ಲೇಖಕರಲ್ಲಿ ಪ್ರಸಿದ್ಧನಾಗಿದ್ದವ ಯೆನ್-ಯುಆನ್ (ಸುಮಾರು ಕ್ರಿ.ಶ. 847). ಇವನು ಉಲ್ಲೇಖಿಸಿರುವ ನೂರಾರು ಕಲೆಗಾರರಲ್ಲಿ ಪ್ರಮುಖನಾದವ ವು-ತವೋ-ತ್ಸು (ಕ್ರಿಸ್ತಾಬ್ದ 700-770). ಇವನ ವಿಚಾರವಾಗಿ ಹಲವಾರು ಉದಂತಗಳು ಪ್ರಚಲಿತವಾಗಿವೆ. ಕುಂಚದ ಕೆಲಸವೆಂದರೆ ಇವನನ್ನು ಮೀರಿಸಿದವರು ಯಾವ ಕಾಲದಲ್ಲೂ ಇಲ್ಲವೆಂದು ಚೀನೀ ಜನರಲ್ಲಿ ಪ್ರತೀತಿ ಇದೆ. ಬಾಸ್ಟನ್‍ನಗರದ ಲಲಿತಾಕಲಾಸಂಗ್ರಹಾಲಯದಲ್ಲಿ ಯೆನ್-ಲಿ-ಪೆನ್ (630-670) ಎಂಬ ಕಲೆಗಾರನ ಚಿತ್ರಸುರುಳಿಯೊಂದನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಇದರಲ್ಲಿ ವೇನ್-ಟಿ ಚಕ್ರವರ್ತಿಯಿಂದ ಸುಯ್ ರಾಜವಂಶದ ಯಾಂಗ್-ಟಿ ಚಕ್ರವರ್ತಿಯವರೆಗೆ ಚೀನದೇಶವನ್ನು ಆಳಿದ ಹದಿನಾರು ಅರಸರ ವ್ಯಕ್ತಿಚಿತ್ರಗಳಿವೆ.

 ಚೀನೀ ಕಲೆಗಾರರಿಗೆ ನಿಸರ್ಗವೆಂದರೆ ಪ್ರಾಚೀನಕಾಲದಿಂದಲೂ ಅನುರಕ್ತಿ. ಆದರೆ ಮೊದಮೊದಲಲ್ಲಿ ವ್ಯಕ್ತಿಗಳ ಹಿನ್ನೆಲೆಯಲ್ಲಿ ಮಾತ್ರ ನಿಸರ್ಗವನ್ನು ಮೂಡಿಸುವ ಪರಿಪಾಠವಿತ್ತು. ಆದರೆ ಈ ಯುಗದಲ್ಲಿ ಪ್ರಕೃತಿಯನ್ನೇ ಸ್ವತಂತ್ರವಾಗಿ ಚಿತ್ರಿಸುವ, ನಿಸರ್ಗದ ವಿವಿಧ ಭಂಗಿಗಳನ್ನು ನಿರೂಪಿಸುವ ಹವ್ಯಾಸ ಮೊದಲಾಯಿತು. ಈ ಕಾರಣದಿಂದಲೇ ಚೀನೀ ಕಲೆಯಲ್ಲಿ ಮನುಷ್ಯನ ಅಥವಾ ಪ್ರಾಣಿಗಳ ಚಿತ್ರಣಕ್ಕಿಂತ, ಪ್ರಸಂಗಗಳ ನಿರೂಪಣೆಗಳಿಗಿಂತ, ನಿಸರ್ಗಚಿತ್ರಣ ಪ್ರಮುಖವಾಗಿದೆ. ಈ ಮನೋವೃತ್ತಿ ಅಂದಿನಿಂದ ಇಂದಿನವರೆಗೂ ಉಳಿದು ಬಂದಿದೆ. ಈ ನಿಸರ್ಗಪಕ್ಷಪಾತವನ್ನು ಚೀನೀಕಲೆಯಲ್ಲಿ ಮೂಡಿಸಿದ ಪ್ರಾಚೀನ ಕಲಾವಿದರಲ್ಲಿ ಲಿ ಸ್ಯೂ-ಷುಯ್‍ನ್ (651-716) ಎಂಬುವನೂ ಅವನ ಮಗ ಲಿ ಚವೋ-ಟವೊ (675-730) ಎಂಬುವನೂ ಪ್ರಮುಖರಾದರು. ಇವರು ಹೊಸದೊಂದು ಸಂವಿಧಾನವೊಂದನ್ನು ಬಳಕೆಗೆ ತಂದರು. ತುಂಬ ಶ್ರಮಸಾಧ್ಯವಾದ ಸೂಕ್ಷ್ಮವಾದ ಕುಂಚಕ್ರಿಯೆಯಲ್ಲಿ ನೀಲಿ, ಹಸಿರು ಪ್ರಧಾನವಾದ ವರ್ಣವ್ಯವಸ್ಥೆಯನ್ನು ರಚನೆ ಮಾಡುವ ಈ ಸಂವಿಧಾನ ಮೊನ್ನೆ ಮೊನ್ನೆಯವರೆಗೂ ಜನಪ್ರಿಯವಾಗಿತ್ತು. ಸ್ವಪ್ನದೃಷ್ಟ ನಿಸರ್ಗಗಳ ಬಣ್ಣನೆಯಲ್ಲಿ ಕೂಡ ಈ ತಂದೆ ಮಕ್ಕಳು ಹೆಸರಾಂತ ಕಲಾವಿದರು; ಇವರ ಕಲ್ಪನೆಗಳು ತುಂಬ ಸ್ವಾರಸ್ಯವಾಗಿರುತ್ತವೆ. ಇವರ ಕಲಾ ಪದ್ಧತಿಯನ್ನು ಉತ್ತರಾದಿ ಶಾಖೆಯೆಂದು ವ್ಯವಹರಿಸುತ್ತಾರೆ. ಇದರಿಂದ ವಿಭಿನ್ನವಾದ ದಕ್ಷಿಣಾದಿ ಶಾಖೆಯ ಪ್ರವರ್ತಕ ವಾಂಗ್-ವೈ (699-759) ಎಂಬ ಕಲೆಗಾರ; ಇವನು ಸುಪ್ರಸಿದ್ಧ ಕವಿಯೂ ಆಗಿದ್ದ. ಇವನ ಸಂಪ್ರದಾಯದಲ್ಲಿ ಚಿತ್ರಗಳು ಬಹು ಬಣ್ಣದವಾಗಿರದೆ, ಒಂದೇ ಬಣ್ಣದವು, ಅದೂ ಕಾಡುಕಪ್ಪು ಬಣ್ಣದಿಂದಲೇ ಎಳೆ ಎಳೆಗಳಲ್ಲಿ ರಚಿತವಾದುವು. ಆದರೆ ಇವನೇ ನಿರ್ಮಿಸಿದ ಕಲಾ ಕೃತಿಗಳು ಇಂದು ಉಪಲಬ್ಧವಿಲ್ಲ. ಕೆಲವು ಪ್ರತಿಕೃತಿಗಳೇನೋ ಇವೆ.
ಮಿಂಗ್ ಹುಆಂಗ್ ಚಕ್ರವರ್ತಿಯ (712-756) ಆಸ್ಥಾನದಲ್ಲಿ ಕಲಾವಿದನಾಗಿದ್ದ ಹಾನ್ ಕಾನ್ ಕುದುರೆಗಳನ್ನು ಚಿತ್ರಿಸುವುದರಲ್ಲಿ ನಿಸ್ಸೀಮ. ಈತ ಅರಮನೆಗೆ ಸೇರಿದ್ದ ಕುದುರೆ ಲಾಯದಲ್ಲಿ ಬಹುಕಾಲ ಕಳೆದು ಕುದುರೆಗಳ ಆಕಾರವನ್ನೂ ಸ್ವಭಾವವನ್ನೂ ಚೆನ್ನಾಗಿ ಅಧ್ಯಯನ ಮಾಡಿದ್ದ. ಇವನ ಕೃತಿಗಳು ಇಂದಿಗೂ ಉಳಿದಿವೆ. ಆ ಕಾಲದ ಭಿತ್ತಿಚಿತ್ರಗಳಲ್ಲಿ ಅತ್ಯಂತ ಸುಪ್ರಸಿದ್ಧವಾದುವೆಂದರೆ ತುನ್ ಹುಆಂಗ್ ಸಮಾಧಿಯಲ್ಲಿ ಒಳಗೋಡೆಗಳ ಮೇಲೆ ಮೂಡಿಸಿರುವ ಚಿತ್ರಗಳು. ಇದರಲ್ಲಿ ಅತ್ಯುತ್ತಮವಾದ ಪುರುಷಚಿತ್ರಣಗಳಿವೆ, ಹಲವಾರು ದೇವತಾಚಿತ್ರಗಳೂ ಇವೆ. ಬುದ್ಧ, ಅಮಿತಾಭರಲ್ಲದೆ ಜಾತಕದ ಕಥೆಗಳನ್ನೂ, ಅಮಿತಾಭನ ಸ್ವರ್ಗವಾದ ಸುಖಾವತಿ ಮತ್ತು ಭೈಷಜ್ಯುಗುರು, ಮೈತ್ರೇಯ ಇವರ ಸರ್ವಗಳನ್ನೂ, ವಿಮಲಕೀರ್ತಿ ನಿರ್ದೇಶನ ಸೂತ್ರದ ಪ್ರಸಂಗವನ್ನೂ ಸ್ವಾರಸ್ಯವಾಗಿ ಚಿತ್ರಿಸಿದ್ದಾರೆ. ಇಲ್ಲಿನ ಶಿಲ್ಪಗಳು ಕೂಡ ನೈಜವಾಗಿ ಸುಂದರವಾಗಿವೆ.
ಚೀನೀ ಕಲೆಯ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿದ್ದ ತಾಂಗ್ ರಾಜವಂಶದವರ ಪತನವಾದ ಆನಂತರ ಐದು ರಾಜವಂಶದ ಯುಗ (902-960) ಆರಂಭವಾಯಿತು. ಚಿಂಗ್‍ಟು ಮತ್ತು ನ್ಯಾನ್‍ಕಿಂಗ್ ನಗರಗಳು ಹಲವಾರು ಪ್ರತಿಭಾವಂತ ಕಲೆಗಾರರನ್ನು ಆಕರ್ಷಿಸಿದುವು. ಇದೇ ಕಾಲದಲ್ಲಿ ಚೀನೀಯರು ಮುದ್ರಣಕಲೆಯನ್ನು ಕಂಡುಹಿಡಿದು ಜಗತ್ತಿಗೆ ಉಪಕಾರ ಮಾಡಿದರು. ಹತ್ತನೆಯ ಶತಮಾನದ ಆದಿಭಾಗದಲ್ಲಿ ಕಲೆಯ, ತತ್ರಾಪಿ ಚಿತ್ರಕಲೆಯ, ಪುನರುಜ್ಜೀವನ ಸಾಧ್ಯವಾಯಿತು. ಚಿತ್ರಕಲೆಯ ಹಲವು ಪ್ರಮುಖ ಪ್ರಕಾರಗಳು ರೂಪುಗೊಂಡವು. ಈ ಕಾಲದ ಹಲವು ಪ್ರಖ್ಯಾತ ಕಲೆಗಾರರ ಜೀವಿತಪ್ರಸಂಗಗಳನ್ನು ಇತಿಹಾಸಕಾರರು ಉಳಿಸಿದ್ದಾರೆ. ಇವರು ಸಂಪ್ರದಾಯದ ಜಾಡನ್ನು ಬಿಟ್ಟು ನವ್ಯವಾದ ಪದ್ಧತಿಗಳನ್ನು ಅನುಸರಿಸಿರುವುದು ಈ ಜೀವಿತಗಳಿಂದ ವ್ಯಕ್ತವಾಗುತ್ತದೆ. ಜಾನ್ (ಜಪಾನಿನ eóÉನ್, ಸಂಸ್ಕøತದ ಧ್ಯಾನ) ಬೌದ್ಧ ಪಂಥ ಇದೇ ಕಾಲದಲ್ಲಿ ಚೀನ ದೇಶದಾದ್ಯಂತ ಪ್ರಸರಿಸಿ ಅದರ ಪ್ರಭಾವದಿಂದ ಒಂದು ಕಲಾಪ್ರಕಾರ ಆರಂಭವಾಯಿತು. ಆಧ್ಯಾತ್ಮಿಕವಾದ, ಅಲೌಕಿಕವಾದ ಅನುಭವಗಳನ್ನು ಚಿತ್ರದಲ್ಲಿ ಮೂಡಿಸುವ ಸಂಪ್ರದಾಯ ಬಳಕೆಗೆ ಬಂತು. ಅಷ್ಟಲ್ಲದೆ, ನಿಸರ್ಗದ ಸಾರವನ್ನೂ ಸಂಬೋಧಿಯ ಅಂತರಾರ್ಥವನ್ನೂ ಶಾಂತಿಯ ಸ್ವರೂಪವನ್ನೂ ಚಿತ್ರಗಳಲ್ಲಿ ಬಿಡಿಸುವ ಉತ್ಸುಕತೆ ಕಾಣತೊಡಗಿತು. ಈ ಪಂಥದ ಮಡಿಲಿನಿಂದ ಸಂಬೋಧಿಯ ಶಾಂತಿ ಮೂರ್ತಿ ಮತ್ತಾಗಿ ಅರ್ಹನ್ (ಚೀನೀ ಭಾಷೆಯಲ್ಲಿ ಲೋಹನ್), ಅಥವಾ ಬುದ್ಧನ ಅಣತಿಯಂತೆ ಧ್ಯಾನಮಾರ್ಗವನ್ನು ಅನುಸರಿಸಿ ಮುಕ್ತಿ ಪಡೆದ ಶಿಷ್ಯರು ಕಲಾಕೃತಿಗಳಿಗೆ ವಸ್ತುಗಳಾದರು. ಬಂಡೆಗಳ ಮೇಲೆ ಕುಳಿತು ಬಂಡೆಗಳಂತೆಯೇ ಕಾಣುವ ಹದಿನಾರು ಲೋಹನ್‍ಗಳ ಚಿತ್ರಣ ಕಲೆಗಾರರಿಗೆ ತುಂಬ ಪ್ರಿಯವಾದ ಹವ್ಯಾಸ. ಇದೇ ಜಾಡನ್ನು ಹಿಡಿದು ನಿದ್ರೆಮಾಡುತ್ತಿರುವ ಹುಲಿಗಳ ಮೇಲೆ ಕುಳಿತ ಲೋಹನ್‍ಗಳನ್ನು ಚಿತ್ರಿಸಿದ ಷಿಹ್-ಕೊ (ಹತ್ತನೆ ಶತಮಾನದ ಅಂತ್ಯಭಾಗ) ಪ್ರಸಿದ್ಧನಾಗಿದ್ದಾನೆ. ಹಕ್ಕಿಗಳನ್ನೂ ಹೂವುಗಳನ್ನೂ ಚಿತ್ರಿಸುವ ಪದ್ಧತಿ ಈ ಕಾಲದಲ್ಲೇ ಹೆಚ್ಚು ಬಳಕೆಗೆ ಬಂತು. ನಿಸರ್ಗದಲ್ಲಿಯೂ ಪರ್ವತಗಳು, ಅದೂ ಬಿದಿರು ಕಡ್ಡಿ, ಎಲೆ ಮುಂತಾದವು ಮೆಚ್ಚಿಗೆಯ ವಸ್ತುಗಳು. ನಿಸರ್ಗವೆಂದರೆ ಅವರ ಪಾಲಿಗೆ ಮನುಷ್ಯನಿಂದ ಭಿನ್ನವಾದ ಬಾಹ್ಯವಾತಾವರಣವಲ್ಲ; ಮನುಷ್ಯನ ಅಂತರಾಳದಲ್ಲೇ ಗುಪ್ತವಾಗಿರುವ ನಿಸರ್ಗದಸಾರವನ್ನು ಚಿತ್ರಿಸುವುದೇ ಕಲೆಗಾರನ ಕರ್ತವ್ಯವೆಂದು ಅವರ ಅಭಿಮತ. ಚಿಂಗ್-ಹೊಮ, ಕುಅನ್-ತುಂಗ್, ಲಿ-ಚಿಂಗ್, ತುಂಗ್ ಯೂವಾನ್, ಚುಯ್-ಜಾನ್, ಫಾನ್‍ಕುಅನ್ ಮುಂತಾದ ಕಲಾವಿದರು ಈ ನಿಸರ್ಗದ ಪಾರಮ್ಯವನ್ನು ನಿರೂಪಿಸಿದವರು ಒಂಬತ್ತು ಶತಮಾನಗಳ ಅನಂತರ ಇಂದಿಗೂ ಅವರ ಹೆಸರುಗಳು ಚೀನೀ ಕಲೆಯಲ್ಲಿ ಉಳಿದಿವೆ. ಅವರ ಆದರ್ಶವನ್ನು ಪ್ರತಿಯೊಂದು ತಲೆಮಾರಿನ ಕಲಾವಿದರೂ ಅನುಕರಿಸಿದರು.

ಮುಂದೆ ಕಾಣುವ ವಸ್ತು ದೂರದ ಮಂಜುಮುಸುಕಿದ ಮಬ್ಬಿನಲ್ಲಿ ಬೆರೆತು ಕಾಣದಾಗುವಂತೆ ಕಲ್ಪನೆಯನ್ನು ಮೂಡಿಸುವ ಶೈಲಿ ಉತ್ತುಂಗದೂರ ಶೈಲಿಯಾದರೆ (ಹೈಡಿಸ್ಟೆನ್ಸ್ ಸ್ಟೈಲ್), ಮುಂದೆ ಕಾಣುವ ಬೆಟ್ಟ ಅದರ ಮುಂದಿರುವ ನದಿಯ ಆಚೆ (ಈಚೆ) ಇರುವ ಮತ್ತೊಂದು ಬೆಟ್ಟದಿಂದ ಕಾಣುವಂತೆ ಚಿತ್ರಿಸುವುದು ಸಮದೂರಶೈಲಿ(ಲೆವಲ್ ಡಿಸ್ಟೆನ್ಸ್ ಸ್ಟೈಲ್). ಚಿಂಗ್ ಹೊ, ಕುಆನ್ ತುಂಗ್ ಇವರು ಮೊದಲ ಶೈಲಿಯವರಾದರೆ ಲಿ ಚೆಂಗ್ ಎರಡನೆಯ ಶೈಲಿಯ ಪ್ರವರ್ತಕ. ಇವನಿಂದ ಪ್ರಭಾವಿತನಾದ ಕುಓ-ಷೀಯ (1025-1075) ವ್ಯಕ್ತಿತ್ವ ತುಂಬ ಸ್ವಾರಸ್ಯವಾದುದು. ಚೀನಿ ಕಲೆಗಾರರಲ್ಲೆಲ್ಲ ಇವನಷ್ಟು ಜನಪ್ರಿಯವಾದ ಕಲೆಗಾರ ಮತ್ತೊಬ್ಬನಿಲ್ಲ. ಇವನಿಂದಲೇ ಆಧುನಿಕ ಚೀನೀ ಕಲೆಯ ಮೂಲತತ್ತ್ವ ಪ್ರತಿಪಾದಿತವಾಯಿತು. ಹು ಅಂಗ್ ತಿ ಇಂ ಚಿಎನ್, ಸು ಷೀ ಮತ್ತು ಮಿಫೈ (1052-1107) ಇವರು ಕೂಡ ಈ ಕಾಲದ ಪ್ರತಿಭಾನ್ವಿತ ಕಲೆಗಾರರು. ಇದರಿಂದಾಗಿ ಚೀನದಲ್ಲಿ ನಾಗರ ಚಿತ್ರಕಲೆಯ (ಲಿಟರ್ಯಾಟಿಪೇಂಟಿಂಗ್) ವೆನ್ ಜೆನ್‍ಹುವ ಶೈಲಿ ಶುರುವಾಗಿ ಹೆಮ್ಮರವಾಗಿ ಬೆಳೆಯಿತು. ಕುಶಾಲಾಕ್ಷರ ಲೇಖನ ಕಲೆಯ (ಕ್ಯಾಲಿಗ್ರಫಿ) ಆದರ್ಶಗಳನ್ನು ವರ್ಣಚಿತ್ರಗಳನ್ನು ಅಳವಡಿಸಿಕೊಂಡು ಕಲಾವಿದ ಬಿಡಿಬಿಡಿ ಗೆರೆಗಳಲ್ಲಿ ಬಿಂದುಗಳಲ್ಲಿ ತನ್ನ ಭಾವಗಳನ್ನು ಅಭಿವ್ಯಕ್ತಿಗೊಳಿಸುವುದು ಸಾಧ್ಯವೆಂಬುದನ್ನು ಇವರು ತೋರಿಸಿಕೊಟ್ಟರು. ಕಲೆಗಾರನಿಗೆ ಕಾಣುವ ವಸ್ತುವಿಗಿಂತ ಅದನ್ನು ಕಾಣುವ ವ್ಯಕ್ತಿತ್ವ ಮುಖ್ಯವೆಂಬುದು ಇವರ ವಾದ; ಈ ಕಾರಣದಿಂದ ಕಲಾಕೃತಿ ದೃಶ್ಯವಸ್ತುವಿನ ಪ್ರತಿಕೃತಿಯೇ ಆಗಿರಬೇಕೆಂಬ ನಿಲುವು ಸಲ್ಲದೆಂದು ಇವರು ವಾದಿಸಿದರು. ಇವರ ಕೃತಿಗಳಿಂದಾಗಿ ಚೀನೀ ಕಲಾವಿಮರ್ಶಕರು ಚೈತನ್ಯ ಅನುರಣನ (ಸ್ಪಿರಿಟ್ ರೆಸೊನೆನ್ಸ್) ಎಂಬ ಪಾರಿಭಾಷಿಕ ಶಬ್ದವನ್ನು ಸೃಷ್ಟಿ ಮಾಡಿದರು. ಕಲೆಯಲ್ಲಿ ಮೂಡಿಬರುವ ಯೋಗ್ಯವಾದಂಥ ಧರ್ಮ ವಸ್ತುವಿನಲ್ಲಿ ಇರಬೇಕಲ್ಲದೆ ಅದನ್ನು ಮೂಡಿಸುವ ಕ್ರಿಯೆಗೆ ಸಮರ್ಥವಾದ ಧರ್ಮವೂ ಕಲೆಗಾರನಲ್ಲಿರಬೇಕು ಎಂಬುದು ಈ ಕಲ್ಪನೆಯ ತತ್ತ್ವ. ಸಹಜವಾಗಿ ಕಲೆಗಾರನ ವ್ಯಕ್ತಿತ್ವವೇ ಮುಖ್ಯವೆಂದು ಬಗೆದ ಈ ಕಲೆಗಾರರು ಕಲಾ ಸಂವಿಧಾನಗಳನ್ನು ನಿಕೃಷ್ಟವಾಗಿ ಕಂಡರು. ಇದು ವಿಮರ್ಶಕರಿಗೆ ಅಷ್ಟಾಗಿ ಹಿಡಿಸಲಿಲ್ಲ. ಈ ಕಲೆಗಾರರು ಜೀವನಕ್ಕಾಗಿ ಕಲೆಯ ವೃತ್ತಿಯನ್ನು ಕೈಗೊಳ್ಳದೆ ಕೇವಲ ಸುಖಕ್ಕಾಗಿ ಚಿತ್ರ ಬರೆಯುತ್ತಿದ್ದರಾಗಿ ಇವರನ್ನು ವಿಮರ್ಶಕರು ಕಲಾವಿಲಾಸಿಗಳು (ಡಿಲೇಟಂಟ್ಸ್) ಎಂದು ಮೂದಲಿಸುತ್ತಾರೆ. ಈ ಕಲೆಗಾರರ, ಇವರ ಶೈಲಿಯ ಗುಣಾವಗುಣಗಳು ಏನೇ ಇರಲಿ, ಇವರಿಂದ ಬಿದಿರು(ವಂಶ)ನಾಳ ಕಲಾಕೃತಿಯ ಆದರ್ಶವಾಯಿತು. ಸು.ಷಿ (1063-1101) ಬಿದಿರು ನಾಳಗಳನ್ನು ಚಿತ್ರಿಸುವುದರಲ್ಲಿ ಅತ್ಯಂತ ಕುಶಲ. ಇನ್ನೊಬ್ಬ ನಾಗರ ಕಲೆಗಾರ ಮಿ ಯು-ಜೇನ್ (1086-1165) ಮತ್ತು ಅವನ ತಂದೆ ಮಿ ಫೈ ಇಬ್ಬರೂ ಇದೇ ಶೈಲಿಯಲ್ಲಿ ಪ್ರಕೃತಿ ಚಿತ್ರಣವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಸೂಂಗ್ ರಾಜವಂಶದ ಅರಸರು ಕಲೆಗಾರರನ್ನು ಮನಸಾರೆ ಪ್ರೋತ್ಸಾಹಿಸಿದ ಕಾರಣ ಇವರ ಆಶ್ರಯದಲ್ಲಿ ಕಲೆ ತುಂಬ ಬೆಳೆಯಿತು. ಅರಮನೆಗೆ ಸೇರಿದ ಕಲೆಗಾರರು ಚಿತ್ರಕರ್ಮ ಅಕಾಡೆಮಿಯೆಂಬ ಸಂಸ್ಥೆಯನ್ನು ಕಟ್ಟಿಕೊಂಡರು. 1101 ರಿಂದ 1126ರವರೆಗೆ ಆಳಿದ ಚಕ್ರವರ್ತಿ ಹುಯ್-ತ್ಸುಂಗ್ ಸ್ವತಃ ಪ್ರತಿಭಾವಂತನಾದ ಕಲೆಗಾರನಾಗಿದ್ದು ಈ ಸಂಸ್ಥೆಯ ಅಧ್ಯಕ್ಷನಾಗಿದ. ಈ ಸಂಸ್ಥೆಯ ಕಲಾವಿದರಿಂದ ಚೀನೀಕಲೆಯ ಪ್ರಕಾರಗಳು ನಿರ್ದಿಷ್ಠವಾದುವು. ಇವರಲ್ಲಿ ಲಿ ಕುಂಗ್-ಲಿನ್ (ಅಥವಾ ಲಿಲುಂಗ್ ಮೈನ್ 1040-1106) ಎಂಬವನು ಬೌದ್ಧಪ್ರಸಂಗಗಳನ್ನು ಅಧಿಕರಿಸಿ ಒಂದೇ ಬಣ್ಣದ ಮೈಗೆರೆಯ ಚಿತ್ರಗಳನ್ನು ರಮ್ಯವಾಗಿ ಬಿಡಿಸಿದ್ದಾನೆ. ಇವಕ್ಕೆ ಪಾಯ್-ಮಿಯವೊ (ಕಾಂಟೂರ್) ಚಿತ್ರಗಳೆಂದು ಹೆಸರು.

ತಾನು ಚಕ್ರಿವರ್ತಿಯಾದ ಮೇಲೆ ಕವೋ-ತ್ಸುಂಗ್ (1127-1162) ಅರಸೊತ್ತಿಗೆಯ ಅಕಾಡೆಮಿಯನ್ನು ಪುನರುಜ್ಜೀವನಗೊಳಿಸಲು ಯತ್ನಿಸಿದ. ಈ ಹೊಸ ಸಂಸ್ಥೆಯ ಅಧ್ಯಕ್ಷನಾಗಿ ವೃದ್ಧಕಲಾವಿದನಾಗಿದ್ದ ಲಿ ತಾಂಗ್ ನೇಮಿತನಾದ. ನಿಸರ್ಗಚಿತ್ರದಲ್ಲಿ ಕುಶಲನಾದ ಈತ ದೊಡ್ಡ ಕೊಡಲಿ ಸುಕ್ಕು (ಬಿಗ್ ಆ್ಯಕ್ಸ್ ರಿಂಕಲ್ಸ್) ಎಂಬ ಕುಂಚಶೈಲಿಯನ್ನು ಪ್ರವರ್ತಿಸಿದ. ಬೆಟ್ಟವನ್ನು ಚಿತ್ರಿಸುವಾಗ ಕಲ್ಲುಪದರಗಳು ಅಡ್ಡಡ್ಡವಾಗಿ ಪೇರಿಸಿಟ್ಟಂತೆ ಕಾಣಿಸುವುದು ಇವನ ಸಂವಿಧಾನ. ಇದೇ ಸಂಸ್ಥೆಗೆ ಸಂಬಂಧಪಟ್ಟಂತೆ ಲಿ ಟಿ ಎಂಬ ಕಲೆಗಾರನೂ ಕೆಲಸ ಮಾಡಿದ. ಮಂಜು, ಹಕ್ಕಿಗಳು, ಗಿಡಗಳನ್ನು ಬಿಡಿಸುವುದರಲ್ಲಿ ಚತುರನಾದ ಲಿಆನ್-ಚುಂಗ್ ಮತ್ತು ಬೆಕ್ಕು ನಾಯಿಗಳನ್ನು ಚಿತ್ರಿಸುವುದರಲ್ಲಿ ಕುಶಲನಾದ ಮಾವೋ-ಇ (1170ರ ಸುಮಾರು) ಇವರೂ ಈ ಸಂಸ್ಥೆಗೆ ಸೇರಿದವರೇ.
ಚೀನಾದ ಕಲಾಪ್ರಪಂಚದಲ್ಲಿ ಮಾ ಮನೆತನ ಪ್ರಸಿದ್ಧವಾದದ್ದು. ಈ ಮನೆತನದ ಐದು ತಲೆಮಾರುಗಳ ಕಲಾವಿದರು ಚೀನ ಚಕ್ರವರ್ತಿಯ ಆಸ್ಥಾನದಲ್ಲಿದ್ದರು. ಕವೊ-ತ್ಸುಂಗ್ ರಾಜನಾಗಿದ್ದಾಗಲೆ ಸೂಂಗ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದ ಮಾ-ಫೆನ್ ಇವರಲ್ಲಿ ತುಂಬ ಪ್ರಸಿದ್ಧನಾದವ. ಕವಿ ಲಿ-ಪೊ ಮತ್ತು ತಪಸ್ವಿಯಓ-ಷಾನ್ ಇವರ ಸಂವಾದವನ್ನು ಮನೋಜ್ಞವಾಗಿ ಚಿತ್ರಿಸಿ ಪ್ರಸಿದ್ಧನಾದ ಚಿ ಕುಂಗ್-ಷಿಎನ್ ಇವನ ಮಗನೇ. ಮಾ-ಫೆನ್ನನ ಮೊಮ್ಮಗ-ಮಾ-ಯೂವಾನ್ ಆ ವಂಶದಲ್ಲೇ ಅತ್ಯಂತ ಪ್ರತಿಭಾವಶಾಲಿಯಾದ ಕಲೆಗಾರ; ಅವನ ಮಗ ಮಾ-ಲಿನ್ ಕೂಡ ಅಷ್ಟೇ ಕುಶಲ, ಪ್ರಸಿದ್ಧ. ವಸ್ತುಗಳನ್ನೆಲ್ಲ ಒಂದು ಬದಿಯಲ್ಲಿ ಮೂಡಿಸಿ ಚಿತ್ರಫಲಕದ ಬಹುಭಾಗವನ್ನು ಆಕಾಶದಿಂದ ತುಂಬಿಸುವ ಶೈಲಿ ಮಾ-ಯೂವಾನನದು. ಇವನ ಮೇಲೆ ತಿ-ತಾಂಗನ ಪ್ರಭಾವವೂ ಬಿದ್ದಿತ್ತು. ಮಾ-ಯುವಾನನೊಂದಿಗೇ ಅಕಾಡೆಮಿಯಲ್ಲಿ ಕೆಲಸಮಾಡುತ್ತಿದ್ದ. ಷಿಯ ಕುಯೈನ (1200 ಸುಮಾರು) ಕುಂಚಕ್ರಿಯೆ ತುಂಬ ನಾಜೂಕಾದುದು. ಇವನ ಹಲವಾರು ಕೃತಿಗಳು ಉಳಿದು ಬಂದಿವೆ. ಇವನ ಮತ್ತು ಮಾ-ಯವಾನನ ತನ್ನದೇ ಆದ ಶೈಲಿಯೊಂದನ್ನು ಆರಂಭಿಸಿದ. ಇವನ ನಿಸರ್ಗಚಿತ್ರದಲ್ಲಿ ಚಿತ್ರಫಲಕದ ಮಧ್ಯೆ ಬೆಟ್ಟಗಳನ್ನು ಮೂಡಿಸಿರುವುದು ಕಂಡುಬರುತ್ತದೆ.

ಚೀನದಲ್ಲಿ ಧ್ಯಾನಬೌದ್ಧಪಂಥ ಬೇರೂರಿದ ಮೇಲೆ ಈ ಅಕಾಡೆಮಿಯ ಪ್ರಭಾವ ವಿಹಾರದಲ್ಲಿದ್ದ ಕಲೆಗಾರ ಭಿಕ್ಷುಗಳ ಮೇಲೆ ಬಿದ್ದು ಪರಿಣಾಮವನ್ನು ಉಂಟು ಮಾಡಿತು. ಅಕಾಡೆಮಿಯ ಅಧಿಕಾರಿಯಾಗಿದ್ದ ಲಿಯಾಂಗ್‍ಕೈ ತನ್ನ ವೃದ್ಧಾಪ್ಯದಲ್ಲಿ ಹಂಗ್‍ಚೌನ ಲಿಯ-ತುಂಗ್-ಸ್ಸೂ ವಿಹಾರದಲ್ಲಿ ನೆಲೆಯಾಗಿ ನಿಂತಮೇಲೆ ಈ ಧ್ಯಾನ ಚಿತ್ರಸಂಪ್ರದಾಯ ಆರಂಭವಾಯಿತು. ವಿಹಾರದಲ್ಲೇ ಇದ್ದ ಭಿಕ್ಷುಗಳು ಸರಳವಾದ ಕುಂಚಕ್ರಿಯೆಯಿಂದ ಅನಿರೀಕ್ಷಿತ ಸ್ಪೂರ್ತಿಯನ್ನು ಅಭಿವ್ಯಕ್ತಗೊಳಿಸಲು ಪ್ರಯತ್ನಿಸಿದರು. ನಿಸರ್ಗಚಿತ್ರಣಕ್ಕಿಂತ ಹೆಚ್ಚಾಗಿ, ಧ್ಯಾನಪಂಥಕ್ಕೆ ಸಂಬಂಧಿಸಿದ ಯತಿಗಳು, ಗೃಹಸ್ಥರು, ಆಶ್ರಯದಾತರು ಇವರ ವ್ಯಕ್ತಿಚಿತ್ರಗಳು ಬೆಳಕಿಗೆ ಬಂದುವು. ಬೌದ್ಧಪಂಥದ ದೇವದೇವತೆಗಳಿಗೆ ಈ ಸಂಪ್ರದಾಯದಲ್ಲಿ ಸ್ಥಾನ ಇರಲಿಲ್ಲ. ಅತ್ಯಲ್ಪ ವ್ಯವಧಾನದಿಂದ ಅತಿಮಹತ್ತ್ವದ ಅರ್ಥವನ್ನು ನಿರೂಪಿಸುವ ಕಾತರ ಈ ಕಲೆಗಾರರಿಗೆ ಇದ್ದಿತು. ಇವರಲ್ಲಿ ಹಲವಾರು ಯಶಸ್ವಿಗಳೂ ಆದರು. ಲಿಯಾಂಗ್ ಕೈನ ಕಲಾಕೃತಿಗಳಲ್ಲಿ ಕಾಣುವ ಅತಿವಿರಳ ಕುಂಚಕ್ರಿಯೆಯ ಸಂವಿಧಾನ (ಸಂಕ್ಷಿಪ್ತ ಕುಂಚಕರ್ಮ, ಚಿಎನ್-ಪಿ) ಇದಕ್ಕೆ ನಿದರ್ಶನ. ಈ ಪಂಥದ ಕಲೆಗಾರರಿಗೆ ಹಂಗ್‍ಚೌನ ಲಿಯ-ತುಂಗ್-ಸ್ಸೂ ವಿಹಾರವೇ ಕೇಂದ್ರವಾಗಿ ಪರಿಣಮಿಸಿತು. ಈ ಕಲಾಕೃತಿಗಳನ್ನು ಜಪಾನೀ ವಿಮರ್ಶಕರು ತುಂಬ ಮೆಚ್ಚಿಕೊಂಡು ಸಂಗ್ರಹಿಸಿದರು. ಇವರ ಸಂಗ್ರಹವೇ ಇಂದು ಉಪಲಬ್ಧವಾಗಿರುವುದು. ಲಿಯಂಗ್ ಕೈ, ಮು-ಚಿ, ಲೋಚುಅಂಗ್, ಲಿ-ಚುಎ, ಯೂಯ್ ಚಿಎನ್ ಮುಂತಾದವರು ಈ ಪಂಥದ ಪ್ರಸಿದ್ಧ ಕಲೆಗಾರರು. ಇವರು ಅಕಾಡೆಮಿ ಸಂಪ್ರದಾಯವನ್ನು ಬಿಟ್ಟು ಭಾವನೆಗಳಿಲ್ಲದೆ, ಧ್ಯಾನಚಿತ್ರದಂಥ ಬಹುಮುಖವಾದ ಸಂಪ್ರದಾಯವನ್ನು ತಳೆದರು. ಈ ಸಂಪ್ರದಾಯ ಮುಂದಿನ ಚೀನೀ ಕಲೆಗಿಂತ ಜಪಾನೀ ಕಲೆಯ ಮೇಲೆ ಸಾಕಷ್ಟು ಪ್ರಭಾವ ಬೀರಿತು.

ಮಂಗೋಲ ಆಳರಸರು ಚೀನೀ ರಾಜವಂಶವನ್ನು ಕೊನೆಗಾಣಿಸಿ ತಮ್ಮದೇ ಆದ ಯೂಆನ್ ವಂಶವನ್ನು 1260ರಲ್ಲಿ ಆರಂಭಿಸಿ 1368ರ ವರೆಗೂ ಚೀನದ ಮೇಲೆ ತಮ್ಮ ಪ್ರಭುತ್ವವನ್ನು ನಿರ್ವಹಿಸಿದರು. ಈ ಒಂದು ಶತಮಾನದ ಅವಧಿಯಲ್ಲಿ ಚೀನಿ ಕಲಾವಿದರಿಗೆ ರಾಜಾಶ್ರಯ ತಪ್ಪಿತು; ಈ ದುಃಸ್ಥಿತಿಯಲ್ಲಿ ಸೂಂಗ್ ಅಕಾಡೆಮಿಯ ಸಂಪ್ರದಾಯವನ್ನೇ ಉಳಿಸಿಕೊಂಡು ಬಂದ ಕಲೆಗಾರರಲ್ಲಿ ಚಿಎನ್ ಹ್ಯುಯಾನ್ (1235-1301) ಚೀನದ ಅತಿಶ್ರೇಷ್ಠ ಕಲಾವಿದರಲ್ಲಿ ಒಬ್ಬನೆಂದು ಪರಿಗಣಿತನಾಗಿದ್ದಾನೆ. ಹಕ್ಕಿಗಳನ್ನೂ ಪತಂಗಗಳನ್ನೂ ಬಿಡಿಸುವುದರಲ್ಲಿ ಅತ್ಯಂತ ಕುಶಲನಾದ ಇವನು ಜಪಾನೀ ಕಲೆಯ ಮೇಲೆ ವಿಶೇಷವಾದ ಪ್ರಭಾವವನ್ನು ಬೀರಿದ. ಸುನ್ ಚುಯ್‍ನ್-ತ್ಸೆ (14ಶತಮಾನದ ಆದಿಭಾಗ) ಮುಂತಾದವರೂ ಸೂಂಗ್ ಅಕಾಡೆಮಿಯ ಸಂಪ್ರದಾಯವನ್ನೇ ಮುಂದುವರಿಸಿದರು. ಹಳೆಯ ಸಂಪ್ರದಾಯವನ್ನು ಬಿಟ್ಟು ಹೊಸಹೊಸ ವೈಯಕ್ತಿಕ ಪ್ರಯೋಗಗಳನ್ನು ನಡೆಸಿ ಯಶಸ್ವಿಗಳಾದ ಚಯೋ ಮೆಂಗ್-ಪು (1254-1322), ಮೆಂಗ್ ಯುಯ್, ಚವೊಯುಂಗ್, ಮುಂತಾದವರೂ ಈ ಅವಧಿಯಲ್ಲಿಯೇ ಕಾಣಿಸಿಕೊಂಡರು. ಧ್ಯಾನಪಂಥದ ಭಿಕ್ಷುಕಲೆಗಾರರೂ ತಮ್ಮ ಕಲಾಕ್ರಿಯೆಯನ್ನು ತಮ್ಮ ಹಳೆಯ ಪದ್ಧತಿಯಲ್ಲಿಯೇ ಮುಂದುವರಿಸಿದರು. ಮುಂಗೋಲ್ ಅರಸರ ಬಳಿ ಅಧಿಕಾರಿಯಾಗಿದ್ದ ಲಿ ಕಅನ್ (1245-1320) ಮತ್ತು ಅವನ ಮಗ ಲಿ ಷಿಹ್-ತ್ಸಿಂಗ್ (1282-1328) ಇವರಿಬ್ಬರೂ ಈ ಯುಗದ ಪ್ರಸಿದ್ಧ ಕಲಾವಿದರು. ಬಿದಿರು, ಮೆಳೆಗಳನ್ನು ವಿಪುಲವಾಗಿ ಚಿತ್ರಿಸಿ ಹಳೆಯ ಪದ್ಧತಿಯನ್ನು ಉಳಿಸಿದರು. ಈ ಯುಗದ ನಿಸರ್ಗಚಿತ್ರಣದ ವೈಶಿಷ್ಟ್ಯವೆಂದರೆ, ಪೂರ್ವದ ಅಕಾಡೆಮಿಯುಗದಲ್ಲಿ ಮನುಷ್ಯನನ್ನು ಪ್ರಮುಖವಾಗಿ ಚಿತ್ರಿಸುವ ಪರಿಪಾಠ ಒದಗಿತ್ತು. ಆದರೆ ಈಗ ಮನುಷ್ಯನ ಚಿತ್ರಣ ಬಂದರೂ ಸಣ್ಣಗಾತ್ರದಲ್ಲಿ ನಿಸರ್ಗ ಮುಖ್ಯವಾಗಿ ಮನುಷ್ಯ ಗೌಣವಾಗಿ ಉಳಿದ. ಪರತಂತ್ರವಾದ ಚೀನ ಈ ಯುಗದಲ್ಲಿ ಕೂಡ ಹೊಸ ಹೊಸ ಸಂವಿಧಾನಗಳ ಪ್ರಯೋಗಗಳನ್ನು ನಡೆಸಿತು. ಹೀಗೆ ಹೊಸ ಹಾದಿಯನ್ನು ಹಿಡಿದ ನಾಲ್ಕು ಮಂದಿ ಕಲಾವಿದರನ್ನು ಯೂಅನ್ ಯುಗದ ನಾಲ್ವರು ಆಚಾರ್ಯರು ಎಂದು ಚೀನೀ ಇತಿಹಾಸಕಾರರು ವ್ಯವಹರಿಸಿದ್ದಾರೆ. ಈ ನಾಲ್ವರು ಯಾರೆಂದರೆ ಹುವಾಂಗ್ ಕುಂಗ್-ವಂಗ್, (1268-1354), ವು ಚೆನ್, (1280-1354), ನಿ ತ್ಸಾನ್ (1301-1384) ಮತ್ತು ವಾಂಗ್ ಮೇಂಗ್ (1308-1385). ಇವರಲ್ಲದೆ ಫಾಂಗ್ ತ್ಸುಂಗ್ ಇ (1310-1380), ತ್ಸವೋಚಿಪೊ (1277-1360) ಮತ್ತು ಷೇಂಗ್ ಮೌ (1310-1361), ಇವರೂ ಸುಪ್ರಸಿದ್ಧ ಕಲೆಗಾರರಾಗಿದ್ದವರು. ಇವರೆಲ್ಲರೂ ನಿಸರ್ಗಚಿತ್ರಣದಲ್ಲಿಯೇ ಅನುರಕ್ತರಾದರು; ಅದೂ ಪರ್ವತಗಳನ್ನು ಬಿಡಿಸುವುದರಲ್ಲಿ ಕೃತಾರ್ಥರಾದರು. ಕವೊ ಕಓ-ಕುಂಗ್ (1248-1310 ಅನಂತರ) ಎಂಬುವನಂತೂ ಅದ್ಭುತ ಪರ್ವತಗಳನ್ನು ರಮಣೀಯ ಸನ್ನಿವೇಶಗಳಲ್ಲಿ ಸೃಷ್ಟಿ ಮಾಡಿದ್ದಾನೆ. ತುರ್ಕಿಸ್ಥಾನದಿಂದ ವಲಸೆ ಬಂದು ಈತ ಚೀನದಲ್ಲಿ ನೆಲಸಿದ. ಹಳೆಯ ಮ.ಫೈ ಕಲೆಗಾರನ ಪ್ರಭಾವ ಇವನ ಕೃತಿಗಳಲ್ಲಿ ಕಾಣುತ್ತದೆ.
ಇದೇ ಯುಗದ ಆರಂಭದಲ್ಲಿ ಶಿಲ್ಪಕಲೆಯೂ ಬಿಳಿಮಣ್ಣಿನ ಕಲೆಯೂ ಮರಗೆತ್ತನೆ ಕೆಲಸವೂ ಬೆಳೆದು ಬಂದುವು. ಬೌದ್ಧಮಂದಿರಗಳಿಗೆ ಹೊಂದಿಕೊಂಡಂತೆ ಶಿಲ್ಪ ಬೆಳೆಯಿತು. ನ್ಯಾನ್‍ಕಿಂಗ್‍ನ ಬಳಿ ಇರುವ ಚಿ-ಸಿಯಾ-ಸು ಮಂದಿರದಲ್ಲಿ ಅದ್ಭುತಶಿಲ್ಪಗಳೂ ಹಿತ್ತಾಳೆಮೂರ್ತಿಗಳು ಇವೆ. ಬುದ್ಧನ ಬಾಳವೆಯನ್ನು ಚಿತ್ರಿಸುವ ಫಲಕಗಳಿವೆ. ಜೇಡಿಮಣ್ಣಿನ ಬೋಧಿಸತ್ತ್ವ, ಲೋಹನ್, ಮುಂತಾದವರ ಪ್ರತಿಕೃತಿಗಳನ್ನು ಮಾಡಿ ಮೇಲೆ ಸೊಗಸಾದ ಬಣ್ಣಗಳನ್ನು ಬಳಿದು ನಿಲ್ಲಿಸುವ ಪದ್ಧತಿ ಕೂಡ ಈ ಯುಗದ ವಿಶೇಷಗಳಲ್ಲಿ ಒಂದು. ಕುಅನ್-ಯಿನ್, ಸಮಂತಭದ್ರ, ಶಾಕ್ಯಮುನಿ, ಭೈಷಜ್ಯಗುರು, ಅಮಿತಾಭ ಮುಂತಾದ ದೇವತೆಗಳ ಶಿಲಾಪ್ರತಿಮೆಗಳು ಕಾಣಿಸಿಕೊಂಡುವು. ಕುಆನ್-ಯಿನ್ ಎಂಬ ಕಾರುಣ್ಯದೇವತೆಯ ಚಿತ್ರಣಗಳಂತೂ ವಿಫುಲವಾಗಿ ನಡೆಯಿತು. ನಿಂತ ಭಂಗಿಯಲ್ಲಿ, ಕೂತ ಭಂಗಿಯಲ್ಲಿ, ಮೀನುಬುಟ್ಟಿಯಲ್ಲಿ ಹಿಡಿದಂತೆ, ಮಹಾ ರಾಜಲೀಲೆಯಲ್ಲಿ-ಹೀಗೆ ನಾನಾಭಂಗಿಗಳಲ್ಲಿ ಮರದ ಗೊಂಬೆಗಳಾಗಿ ಶಿಲಾಪ್ರತಿಮೆಗಳಾಗಿ, ಹಿತ್ತಾಳೆ ಪುತ್ಥಳಿಗಳಾಗಿ ಆಕೆ ಮೈದಳೆದಳು. ಮಹಾಯಾನ ಬೌದ್ಧಧರ್ಮದ ಅವಲೋಕಿತೇಶ್ವರ ಚೀನೀ ರೂಪಾಂತರ ಈ ಕುಅನ್-ಯಿನ್. ಕಬ್ಬಿಣದಲ್ಲಿ ಎರಕಹೊಯ್ದು ಮಾಡಿದ ಗೊಂಬೆಗಳೂ ಈ ಯುಅನ್ ಯುಗದಲ್ಲಿ ಬಂದುವು. ಚಿಎನ್-ಪೊ-ಕೋ ಎಂಬಲ್ಲಿ ಸಹಸ್ರಬುದ್ಧ ಮಂಟಪದಲ್ಲಿ ನೂರಾರು ಬುದ್ಧನ ಪ್ರತಿಮೆಗಳನ್ನು ಈ ರೀತಿ ಮಾಡಿ ಇಟ್ಟಿದ್ದಾರೆ.

ಪರದೇಶದವರಾದ ಮಂಗೋಲ ಜನರ ಆಳ್ವಿಕೆ ಕೊನೆಗೊಂಡು 1368ರಲ್ಲಿ ಆರಂಭವಾದ ಮಿಂಗ್ ರಾಜವಂಶದ ಯುಗ 1644ರ ವರೆಗೂ ಉಳಿಯಿತು. ಈ ಅವಧಿಯಲ್ಲಿ ಕಲೆಗೆ ಅಮಿತವಾದ ಪ್ರೋತ್ಸಾಹ ದೊರಕಿತು. ಮೊದಲ ಮಿಂಗ್ ಚಕ್ರವರ್ತಿ ಸೂಂಗ್ ಯುಗದಲ್ಲಿದ್ದ ಅಕಾಡೆಮಿಯನ್ನು ಮತ್ತೆ ಪುನರುಜ್ಜೀವನಗೊಳಿಸಿದ. ಯೂಅನ್ ಯುಗದ ನಾಲ್ವರು ಆಚಾರ್ಯರ ಪರಂಪರೆ ಮುಂದುವರಿಯಿತು. ವಾಂಗ್ ಪು ನ ಶಿಷ್ಯ ತು-ಚಿಯುಂಗ್ (1336-1474), ಲಿಯು ಚಾಯ್‍ಹೆ (1410-1472) ಮತ್ತು ಷಿಯಾ-ಚುಅಂಗ್ (1388-1470) ಇವರು ಆ ಪರಂಪರೆಯಲ್ಲೇ ಬಂದವರು. ಮೊದಲ ಇಬ್ಬರು ನಿಸರ್ಗಚಿತ್ರಕಾರರು; ಮೂರನೆಯವ ವಂಶನಾಳಗಳ ಚಿತ್ರಣದಲ್ಲಿ ಕುಶಲನಾಗಿದ್ದ. ದಕ್ಷಿಣದ ಪುಕಿಯನ್ ಪ್ರದೇಶದಿಂದ ಹಲವಾರು ಕಲಾವಿದರು ಚಕ್ರವರ್ತಿಯ ಆಸ್ಥಾನವನ್ನು ಸೇರಿ ತಾವು ಉಳಿಸಿಕೊಂಡು ಬಂದಿದ್ದ ಮಾ ಸಂಪ್ರದಾಯ ಮತ್ತು ಷಿಯ ಸಂಪ್ರದಾಯಗಳನ್ನು ಮತ್ತೆ ಹರಡಲು ಉದ್ಯುಕ್ತರಾದರು. ಈಗ ಪುನರುಜ್ಜೀವಿತವಾದ ಅಕಾಡೆಮಿಯ ಪ್ರಮುಖ ನಿಸರ್ಗಚಿತ್ರಕಾರ ಲಿ-ತ್ಸಾಯ್, ಚೆ-ಪದ್ಧತಿಯ ಪ್ರವರ್ತಕನೆನಿಸಿದ ತಾಯ್-ಚಿನ್, ಇವರಿಬ್ಬರೂ ಸುಅನ್-ತೇ ಚಕ್ರವರ್ತಿಯ ಕಾಲದಲ್ಲಿದ್ದವರು. ಚೆ ಪದ್ಧತಿಯನ್ನೂ ಅಕಾಡೆಮಿಯ ಸಂಪ್ರದಾಯವನ್ನೂ ತನ್ನ ಶೈಲಿಯಲ್ಲಿ ಅಳವಡಿಸಿಕೊಂಡ ವು-ವೈ (1459-1508) ಇಬ್ಬರು ಚಕ್ರವರ್ತಿಗಳಿಂದಲೂ ಸನ್ಮಾನಿತನಾದವ. ಸ್ವಾರಸ್ಯವಾದ, ಹಾಸ್ಯರಸವನ್ನು ಸೂಸುವ ಇವನ ಚಿತ್ರಗಳೂ ಇಂದಿಗೂ ಪ್ರಸಿದ್ಧವಾಗಿವೆ. ಇವನನ್ನು ಹೊಸದೊಂದು ಪದ್ಧತಿಯ, ಚಿಯಾಂಗ್-ಸಿಯ ಎಂಬ ಹೆಸರಿನ ಪದ್ಧತಿಯ, ಪ್ರವರ್ತಕನೆಂದೂ ಕೆಲವು ಚೀನೀ ವಿಮರ್ಶಕರು ನಿರ್ದೇಶಿಸಿದ್ದಾರೆ.

ಸ್ವಚ್ಛಂದವಾದ, ಅನಿಯಂತ್ರಿತವಾದ, ಸ್ಥೂಲವಾದ ಮತ್ತು ಲವಲವಿಕೆಯ ಕುಂಚಕ್ರಿಯೆ ಈ ಯುಗದ ಅಕಾಡೆಮಿ ಚಿತ್ರಗಳಲ್ಲಿಯೂ ಚೆ-ಶೈಲಿಯ ಚಿತ್ರಗಳಲ್ಲಿಯೂ ಕಾಣಬರುತ್ತದೆ. ಚಾಂಗ್-ಲು (1464-1538), ಚಿಯಾಂಗ್-ಸೂಂಗ್ (ಸು.1500). ಲಿನ್-ಲಿಯಾಂಗ್ (ಅದೇ ಸುಮಾರು) ಇವರ ಚಿತ್ರಗಳೂ ಈ ಕುಂಚಕ್ರಿಯೆಗೆ ನಿದರ್ಶನಗಳು. ಲಿನ್-ಲಿಯಾಂಗನ ಹಕ್ಕಿಗಳು ಜೀವಂತವಾಗಿರುವಂತೆಯೇ ಭಾಸವಾಗುತ್ತವೆ. ವು-ಪದ್ಧತಿ ಬೆಳೆದದ್ದು ಈ ಯುಗದ ವೈಶಿಷ್ಟ್ಯಗಳಲ್ಲೊಂದು. ಯಾಂಗ್‍ಟ್ಸೀ ನದಿಯ ಪಕ್ಕದಲ್ಲಿ ಜಿಯಾಂಗ್ ಸೂ ಪ್ರದೇಶಕ್ಕೆ ಸೇರಿದ್ದವು. ಜಿಲ್ಲೆ ಹಳೆಯ ಕಲಾಸಂಪ್ರದಾಯಗಳನ್ನೇ ಉಳಿಸಿಕೊಂಡು ಬಂದಿತ್ತು; ಅರಸರ ಅಕಾಡೆಮಿಯೊಂದಿಗೆ ಇದು ಯಾವ ಸಂಬಂಧವನ್ನೂ ಇಟ್ಟುಕೊಂಡಿರಲಿಲ್ಲ. ಸೂ-ಚೌ ನಗರದ ಪರಿಸರದಲ್ಲಿ ಬೆಳೆದು ಬಂದ ಈ ಸಂಪ್ರದಾಯ ಆ ಜಿಲ್ಲೆಯ ಅಭಿದಾನವನ್ನೇ ತಳೆದು ವು-ಪದ್ಧತಿ ಎನಿಸಿಕೊಂಡಿತು. ಷೇನ್-ಚೌ (1427-1509) ಎಂಬಾತ ಈ ಪದ್ಧತಿಯ ಪ್ರವರ್ತಕನೆಂದು ಹೇಳುತ್ತಾರೆ. ಶ್ರೀಮಂತರ ಮನೆತನದಲ್ಲಿ ಬಂದ ಈತ ಅರಸರ ಬಳಿ ಯಾವ ಹುದ್ದೆಯನ್ನೂ ಅಪೇಕ್ಷಿಸದೆ ಸ್ವತಂತ್ರವಾಗಿ ಇದ್ದುಕೊಂಡು ಚಿತ್ರಕರ್ಮ, ಕವಿತೆ, ಅಕ್ಷರಲೇಖನ ಕಲೆ ಮುಂತಾದ ಹವ್ಯಾಸಗಳಲ್ಲಿ ಕಾಲಕಳೆದ. ಇವನ ಚಿತ್ರಗಳಲ್ಲಿ ಹಲವಾರು ಹಳೆಯ ಕಲೆಗಾರರ ಪ್ರಭಾವ ಕಾಣುತ್ತದೆ. ಅಡ್ಡಾದಿಡ್ಡಿಯ ಕುಂಚಕ್ರಿಯೆಯನ್ನು ಈತನೇ ಆರಂಭಿಸಿ ಬಳಕೆಗೆ ತಂದನೆಂದು ಪ್ರತೀತಿ. ಇವನದೆಂದು ಹೇಳಲಾದ ಕೆಲವು ಒರಟು ಚಿತ್ರಗಳು ಉಳಿದು ಬಂದಿವೆ. ಷೇನ್-ಚೌಗೆ ಹಲವಾರು ಶಿಷ್ಯರಿದ್ದರು. ಅವರಲ್ಲಿ ವೇನ್-ಚಿಂಗ್_ಮಿಂಗ್ (1470-1559) ಎಂಬುವನು ಪ್ರಮುಖ. ಗುರುವಿನಂತಲ್ಲದೆ ಇವನದು ನಾಜೂಕು ಕೆಲಸ. ಇವನ ಮಗ ವೇನ್ ಚಿಯ (1501-1583) ಮತ್ತು ಸೋದರಳಿಯ ವೇನ್ ಪೋ-ಜೇನ್ (1502-1580) ಇವನ ಸಂಪ್ರದಾಯವನ್ನು ಮುಂದುವರಿಸಿದರು. ಇವರಲ್ಲದೆ ಲು-ಚಿ (1496-1576) ಎಂಬ ಹೂಗಳ ಚಿತ್ರಕಾರ, ಚ್ ಎನ್-ಶುನ್ (1483-1514), ಮತ್ತು ಚ್‍ಎನ್-ಕು (1508-1572) ಇವರೂ ಇವನ ಶಿಷ್ಯರೇ. ಮಿಂಗ್ ಯುಗದ ನಾಲ್ವರು ಆಚಾರ್ಯರು ಎಂದು ತ್‍ಆಂಗ್-ಯಿನ್ (1470-1524), ಚಿಯು-ಯಿಂಗ್ (16ನೆಯ ಶತಮನದ ಆದಿಭಾಗ), ಇವರಿಬ್ಬರೂ ಮೇಲೆ ಹೇಳಿದ ಷೇನ್-ಚೌ ಮತ್ತು ಚೇಂಗ್-ಮಿಂಗ್ ಇವರೆಲ್ಲರೂ ಸೂಚೌ ನಗರದಲ್ಲೇ ಕೆಲಸ ಮಾಡುತ್ತಿದ್ದರು. ಇವರ ಪ್ರಭಾವ ಇರುವವರೆಗೆ ನಾಗರಪದ್ದತಿ ಹಿಂದೆ ಬಿತ್ತು. ಆದರೆ ಈ ನಾಲ್ವರು ತೀರಿಕೊಂಡ ಅನಂತರ ಸುಚೌ ನಗರದಲ್ಲೂ ಯಾಂಗ್‍ಟ್ಸಿನದಿಯ ಪ್ರಸ್ಥಭೂಮಿಯಲ್ಲೂ ನಾಗರಪದ್ಧತಿ ಮತ್ತೆ ತಲೆಯೆತ್ತಿತು. ಈ ಪುನರುತ್ಥಾನಕ್ಕೆ ಕಾರಣರಾದವರು ಮಾ ಷಿ -ಲುಂಗ್ ಅವನ ಕ್ರಿಯಾಶೀಲ ಅವಧಿ (1570-1600), ಚ್-ಎನ್ ಚಿ-ಜು (1558-1639), ತುಂಗ್ ಚುಇಚಾಂಗ್ (1555-1636). ಇವರು ಚೀನೀ ಚಿತ್ರಕಲೆಯನ್ನು ಉತ್ತಾರಾದಿ, ದಕ್ಷಿಣಾದಿ ಎಂದು ವಿಭಾಗಮಾಡಿ ಪ್ರಚಾರವಾಗಿದ್ದ ಎಲ್ಲ ಕಲೆಗಾರರ ಹೆಸರನ್ನೂ ಪಟ್ಟಿ ಮಾಡಿ ಮುಂದಿನ ತಲೆಮಾರುಗಳಿಗೆ ಉಪಕಾರ ಮಾಡಿದ್ದಾರೆ. ಅಷ್ಟಲ್ಲದೆ ಚೀನೀ ಕಲೆಯ ಉಗಮ, ವಿಕಾಸಗಳ ವಿಚಾರವಾಗಿ ತಮ್ಮದೇ ಆದ ಸಿದ್ಧಾಂತವೊಂದನ್ನೂ ನಿರೂಪಿಸಿದ್ದಾರೆ. ಇವರಲ್ಲಿ ಒಬ್ಬೊಬ್ಬರೂ ಒಂದೊಂದು ಶಾಖೆಯನ್ನು ಪ್ರವರ್ತನೆಮಾಡಿ ಪ್ರಸಿದ್ಧರಾಗಿದ್ದಾರೆ. ಇವರೆಲ್ಲರ ಆಸಕ್ತಿಯ ಫಲವಾಗಿ ಚೀನೀ ಕಲೆಯಲ್ಲಿ ನಿಸರ್ಗ ಸರ್ವಪ್ರಮುಖವಾಗಿ ಉಳಿಯಿತು. ವೇನ್-ಜೇನ್‍ಹುವಾ ಎಂಬ ಕಲಾಸಂಪ್ರದಾಯ ಬೇರೂರಿತು. ಇವರ ಸಮಕಾಲಿಕರಾಗಿ ಇಬ್ಬರು ಸ್ತ್ರೀಯರು ಗಿಡಗಂಟೆಗಳನ್ನು ಚಿತ್ರಿಸಿ ಪ್ರಸಿದ್ಧರಾಗಿದ್ದಾರೆ. ಇವರು ಮಾಷೌ-ಚಿನ್ (16ನೆಯ ಶತಮಾನದ ಅಂತ್ಯಭಾಗ) ಮತ್ತು ಸುಯ್‍ಎ-ವು (1564-1637).

ಮಿಂಗ್ ಯುಗದ ಕಲೆಗಾರರಲ್ಲೆಲ್ಲ ಅತ್ಯಂತ ಸ್ವಾರಸ್ಯವಾದ ವ್ಯಕ್ತಿ ಸೂಯ್-ವೈ (1521-1593). ಈ ವಿಚಿತ್ರವ್ಯಕ್ತಿಯ ಉದ್ದಂಡವರ್ತನೆ ಇವನನ್ನು ಉನ್ನತ್ತನೆಂದೇ ಹೆಸರುಗಳಿಸಿತ್ತು. ಕ್ರೂರಿ ಹಾಗೂ ಅನಿಯಂತ್ರಿತ ಚಿತ್ತವೃತ್ತಿಯವನಿವನು. ಇವನ ಕಲಾಕೃತಿಗಳೆಲ್ಲ ಬೀಭತ್ಸವಾಗಿವೆ. ಮಿಂಗ್ ಯುಗದಲ್ಲಿ ವ್ಯಕ್ತಿಚಿತ್ರಣಕ್ಕೆ ಅಷ್ಟಾಗಿ ಉತ್ತೇಜನ ದೊರೆಯಲಿಲ್ಲ. ಉದ್ಯಾನ, ವನ, ಪರ್ವತ, ನದಿ, ಪಶುಪಕ್ಷಿಗಳು ಗಿಡಗಂಟೆ, ಪತಂಗಭೃಂಗಗಳು ಇವೇ ಚಿತ್ರಕಲೆಯ ಮುಖ್ಯವಸ್ತುಗಳಾಗಿ ಉಳಿದುವು. ಆದರೆ ಬೌದ್ಧಪಂಥ ಪ್ರಬಲವಾಗಿದ್ದೆಡೆ ಬುದ್ಧ, ಬೋಧಿಸತ್ತ್ವ, ಅರ್ಹನ್ (ಲೋಹನ್), ಬೌದ್ಧ ದೇವತೆಗಳು ಇವರ ಚಿತ್ರಣಗಳು ಮೂಡಿಬಂದುವು. ಈ ದಿಸೆಯಲ್ಲಿ ಪ್ರಮುಖರಾದವರು ಯುಅನ್-ಪ್-ಎಂಗ್ (ಸುಮಾರು 1600) ಮತ್ತು ಚ್‍ಎನ್-ಹುಂಗ್-ಷು (1599-1652). ಇವರ ಪ್ರಭಾವವೇನೋ ಸಂಕುಚಿತವಾಗಿತ್ತು.

ವಿಂಗ್ ಯುಗದ ಕಲೆ ಸೂಚೌ, ಹಾಂಗ್‍ಚೌ, ಪೀಕಿಂಗ್ ನಗರದಲ್ಲಿ ಬೆಳೆಯಿತು. ತುಂಗ್ ರ್ಚ-ಇ-ಚ್ ಯಾಂಗನ ಕಲೆ ಸುಂಗ್‍ಚಿಯಾಂಗ್‍ನಲ್ಲೆ ಕಾಣಿಸಿಕೊಂಡಿತು. ಆದರೆ ಸೂಚೌ ಪ್ರಮುಖವಾದಷ್ಟು ಬೇರೆ ಯಾವ ನಗರವೂ ಆಗಲಿಲ್ಲ. ಸು-ಸುಂಗ್ ಎಂಬಲ್ಲಿ ಆ ಹೆಸರಿನ ಪದ್ಧತಿಯೊಂದು ಪ್ರವರ್ತಿತವಾಯಿತು. ಇದರ ಪ್ರವರ್ತಕ ಚಾಓತ್ಸೋ (ಸುಮಾರು 1600) ಎಂಬ ಪ್ರತಿಭಾಶಾಲಿಗಾರ. ಇವನು ಸು-ಪದ್ಧತಿ, ಮತ್ತು ಸೂಂಗ್ ಪದ್ಧತಿ ಎರಡನ್ನೂ ಸೇರಿಸಿ ಇದನ್ನು ಆರಂಭಿಸಿದನಂತೆ. ಸು-ಪದ್ಧತಿ ಸೂಚೌ ನಗರದಲ್ಲಿ ಬೆಳೆದು ಬಂದದ್ದು, ಹಾಂಗ್‍ಚೌನಲ್ಲಿ ಹಳೆಯ ಚೀ ಪದ್ಧತಿ ಉಳಿದು ಬಂದಿತು.

ಮಿಂಗ್ ಯುಗದ ಅನಂತರ ಚೀನ ದೇಶದಲ್ಲಿ ಪ್ರಸಿದ್ಧವಾದದ್ದು ಚ್‍ಇಂಗ್ ರಾಜವಂಶ (1644-1912). ಈ ಅವಧಿ ಹೆಚ್ಚೂ ಕಡಿಮೆ ಕ್ರಾಂತಿಯಾಗುವವರೆಗೂ ಉಳಿದು ಬಂತು. ಈ ರಾಜರು ಮಂಚು ಜನಾಂಗದವರಾದರೂ ಚೀನೀ ಸಂಸ್ಕøತಿಯ ಪಕ್ಷಪಾತಿಗಳಾಗಿ ಚೀನೀ ಕಲೆಗೆ ವಿಪುಲವಾದ ನೆರವನ್ನು ನೀಡಿದರು. ಇವರಲ್ಲಿ ಶೇಂಗ್ -ತ್ಸು (ಆಳ್ವಿಕೆ 1662-1722), ಷಿ-ತ್ಸುಂಗ್ (ಆಳ್ವಿಕೆ 1723-1735) ಮತ್ತು ಕಓ-ತ್ಸುಂಗ್ (1736-1795) ಇವರು ಕಲೆಯ ವಿಚಾರವಾಗಿ ವಿಶೇಷವಾದ ಆಸಕ್ತಿಯನ್ನು ತೋರಿಸಿದರು. ಹಳೆಯ ಕಲಾಕೃತಿಗಳನ್ನೆಲ್ಲ ಆಸ್ಥೆಯಿಂದ ಸಂಗ್ರಹಿಸಿದರು. ಕಲೆಗಾರರ ಜೀವಿತವೃತ್ತಾಂತಗಳನ್ನು ಕ್ರೋಡೀಕರಿಸಿದರು. ಇವರು ಕಲಾಸೃಷ್ಟಿಯ ವಿಚಾರಕ್ಕಿಂತಲೂ ಕಲಾಸಂಗ್ರಹದ ವಿಚಾರವಾಗಿ ಹೆಚ್ಚು ಶ್ರದ್ಧೆವಹಿಸಿದರು. ಸಂಸ್ಕøತಿಯನ್ನು ತಲೆಮಾರುಗಳಲ್ಲಿ ಹರಿಸುವುದೇ ಮುಖ್ಯವಾದ ವಿಚಾರವೆಂದೂ ಹೊಸಕೃತಿಗಳನ್ನು ರಚನೆ ಮಾಡುವುದು ಶ್ಲಾಘ್ಯವಲ್ಲವೆಂದೂ ಕಾನ್‍ಫ್ಯೂಷಸ್ ಹೇಳಿದುದನ್ನು ಇವರು ಅನುಮೋದಿಸಿದರು. ಈ ದೃಷ್ಠಿಯಿದ್ದುದರಿಂದ ಕಲ್ಪನಪ್ರಮುಖರಾದ ಕಲೆಗಾರರಿಗೆ ಮೊದಮೊದಲು ಅಷ್ಟಾಗಿ ಪ್ರೋತ್ಸಾಹ ದೊರೆಯಲಿಲ್ಲ. ಪೀಕೀಂಗ್ ನಗರದಿಂದ, ಎಂದರೆ ಚ್‍ಇಂಗ್ ರಾಜರ ರಾಜಧಾನಿಯಿಂದ, ದೂರ ದಕ್ಷಿಣದಲ್ಲಿ ಇದ್ದ ಕಲೆಗಾರರು ತಮ್ಮ ಪಾಡಿಗೆ ತಾವು ಹಳೆಯ ಕಲಾ ಸಂಪ್ರದಾಯಗಳನ್ನು ಉಳಿಸಿಕೊಂಡು ಬೆಳೆಸುತ್ತಾ ಬರುತ್ತಿದ್ದರು. ಈ ಕಲೆಗಾರರಲ್ಲಿ ಲೌ-ತುಂಗ್ (ಅಥವಾ ತಾಯ್-ತ್‍ಸಂಗ್) ಶಾಖೆಗೆ ಚಿಎನ್ (1598-1677) ಇವರು ಈ ಶಾಖೆಯ ಪ್ರವರ್ತಕರೆನ್ನಬಹುದು. ಇವರ ಅನಂತರ ವಾಂಗ್‍ಷಿ-ಮಿನ್ನನ ಶಿಷ್ಯ ವಾಂಗ್ ಹುಯ್ (1632-1717) ಮತ್ತು ಮೊಮ್ಮಗ ವಾಂಗ-ಯುಅಂಗ್ ಚ್‍ಇ (1642-1715) ಇವರಿಬ್ಬರು ಪ್ರಖ್ಯಾತರಾದರು. ಈ ನಾಲ್ಕೂ ಜನರನ್ನು ಒಟ್ಟಾರೆ ನಾಲ್ವರು ವಾಂಗ್‍ಗಳು ಎಂದು ವ್ಯವಹರಿಸುತ್ತಾರೆ. ಇವರು ಪ್ರಾಚೀನರಾದ ಹುಅಂಗ್ ಕುಂಗ್-ವಾಂಗ್ ಮತ್ತು ನಿತ್ಸನ್ ಈ ಇಬ್ಬರು ಕಲೆಗಾರರನ್ನೂ ಆದರ್ಶಗಳೆಂದು ಪರಿಗ್ರಹಿಸಿ ಅವರ ಕಲಾಕೃತಿಗಳನ್ನು ಸಂಗ್ರಹಿಸಲು ತುಂಬ ಶ್ರಮ ವಹಿಸಿದರು, ಮತ್ತು ಅವರ ಕೃತಿಗಳಿಗೆ ಯಥಾವತ್ತಾಗಿ ಪ್ರತಿಕೃತಿಗಳನ್ನು ನಿರ್ಮಿಸಲೂ ಶ್ರಮಿಸಿದರು. ಈ ನೈಜ ಪ್ರತಿಕೃತಿಗಳು ಇಂದಿಗೂ ಉಳಿದಿವೆ. ಈ ನಾಲ್ವರು ವಾಂಗ್‍ಗಳಲ್ಲಿ ಯುಆಂಗ್-ಚ್‍ಇ 1708ರ ಸುಮಾರಿಗೆ ಚಕ್ರವರ್ತಿಯ ಅಪ್ಪಣೆಯಂತೆ ಚೀನೀ ಕಲೆಯ ವಿಶ್ವಕೋಶವನ್ನು ರಚಿಸಿದ.

ಈ ವಾಂಗ್‍ಗಳಿಗೆ ರಾಜಸನ್ಮಾನ ದೊರೆತರೂ ಅವರಿಗಿಂತ ಹೆಚ್ಚಿನ ಪ್ರಭಾವವನ್ನು ಬೀರಿದ ಷಿನ್‍ನಾನ್‍ನ ನಾಲ್ವರು ಕಲೆಗಾರರೂ ಯಾಂಗ್‍ಚೌನ ಎಂಟು ಮಂದಿ ವಿಚಿತ್ರವ್ಯಕ್ತಿಗಳೂ ಚಿನ್ ಲಿಂಗ್‍ನ ಎಂಟು ಮಂದಿ ಆಚಾರ್ಯರೂ ಇದೇ ಯುಗದವರು. ಷಿನ್ ನಾನ್ ಅನ್ಹ್‍ವೈ ಜಿಲ್ಲೆಯಲ್ಲಿನ ಊರು. ಈ ಊರಿನ ಚ್‍ಅ-ಷಿ-ಪಿಅಓ (1615-1698) ಎಂಬ ಅಧಿಕಾರಿಯೂ ಹುಂಗ್ ಜೇನ್ (ಸುಮಾರು 1663) ಎಂಬ ಬೌದ್ಧಬಿಕ್ಷುವೂ ಒಣಕುಂಚ (ಡ್ರೈ ಬ್ರಷ್) ಸಂವಿಧಾನವನ್ನು ಬಳಕೆಗೆ ತಂದರು. ಚಿನ್‍ಲಿಂಗ್ ಎಂಬುದು ನ್ಯಾನ್‍ಕಿಂಗ್ ನಗರಕ್ಕೆ ಮೊದಲಿದ್ದ ಹೆಸರು. ಇಲ್ಲಿದ್ದ ಎಂಟುಮಂದಿ ಆಚಾರ್ಯರಿಗೆ ಪರಸ್ಪರ ಯಾವ ಸಂಬಂಧವೂ ಇರಲಿಲ್ಲ. ನದಿಗಳನ್ನು ರಮ್ಯವಾಗಿ ಚಿತ್ರಿಸುತ್ತಿದ್ದ ಫಾನ್-ಚಿ (1616-1692) ಇವರಲ್ಲಿ ಒಬ್ಬ. ಸಂವಿಧಾನದ ಬಗ್ಗೆ ಆಳವಾದ ಆಸಕ್ತಿಯನ್ನು ತೋರಿಸಿದ ಕುಂಗ್ ಷಿಎನ್ (1625-1698ರ ಅನಂತರ) ಇನ್ನೊಬ್ಬ. ಇವನ ಶಿಷ್ಯ ವಾಂಗ್-ಕೈ ಚಿತ್ರಕಲೆಯ ವಿಶ್ವಕೋಶವೊಂದನ್ನು ಸಿದ್ಧಪಡಿಸಿದ. ಯಾವ ಸಂಪ್ರದಾಯಕ್ಕೂ ಸೇರದೆ ಸ್ವತಂತ್ರವಾಗಿ ಉಳಿದ ಕಲೆಗಾರರಲ್ಲಿ-ಕುಉನ್-ತ್ಸಾನ್ (ಸಿ:-ಛಿ) ಮತ್ತು ಶಿ-ತಓ ಇವರಿಬ್ಬರು ಪ್ರಖ್ಯಾತರು. ಇಬ್ಬರು ಬೌದ್ಧ ಭಿಕ್ಷುಗಳಾದರೂ ಸಂಪ್ರದಾಯ ಬಾಹ್ಯರು. ಧ್ಯಾನಪಂಥದ ಆದರ್ಶ ಇಬ್ಬರ ಕೃತಿಗಳಲ್ಲಿಯೂ ಕಾಣುತ್ತದೆ; ಪ್ರಕೃತಿ ಚಿತ್ರದಲ್ಲಿ ನಿಷ್ಠರುವಾದ ಏಕಾಂತ, ನಿಷ್ಕ್ರಿಯ ಶಾಂತಿ ಇವು ಮುಖ್ಯಗುಣಗಳು; ಮನುಷ್ಯನ ಚಿತ್ರಣ ತೀರ ಗೌಣವಾಗಿ ನಿಸರ್ಗವೇ ಮುಖ್ಯವಾಗಿ ಅಭಿವ್ಯಕ್ತವಾಗಿದೆ. ಇವರಿಬ್ಬರ ಕಲಾಕೃತಿಗಳಲ್ಲಿ ನಿಸರ್ಗ ಚಿತ್ರಣವೇ ಹೆಚ್ಚು; ಸಂವಿಧಾನದಲ್ಲಿಯೂ ವೈವಿಧ್ಯವಿದೆ. ಇದಕ್ಕೆ ಕಾರಣ ಅವರು ಯಾವೊಂದು ನಿರ್ದಿಷ್ಟವಾದ ಶೈಲಿಯನ್ನೂ ಅನುಸರಿಸದೇ ಇದ್ದುದು. ಚು-ಟ ಎಂಬ ಕಲಾವಿದ ಮಿಂಗ್ ಅರಸರ ನೆಂಟನಾಗಿದ್ದರೂ ಏಕಾಂತ ಪ್ರಿಯನಾಗಿದ್ದು, ಹಲವಾರು ರಮ್ಯಚಿತ್ರಗಳನ್ನು ಬಿಡಿಸಿದ್ದಾನೆ. ಹಕ್ಕಿ, ಮೀನು, ಹೂವು, ಬೆಟ್ಟ ಇವುಗಳ ಜೋಡಣೆ ತುಂಬ ಸ್ವಾರಸ್ಯವಾಗಿದೆ. ಆದರೆ ಇವನ ಕಲಾಕೃತಿಗಳೆಲ್ಲ ಹುಚ್ಚು ಮನಸ್ಸಿನ ಹತ್ತುಮುಖಗಳು; ಉದ್ವೇಗದ, ಆವೇಶದ ಭರದಲ್ಲಿ ಮೂಡಿಬಂದವು. ಆನ್ ಹ್ವೇ ಜಿಲ್ಲೆಯವನಾದ ಮೈ-ಚಿಂಗ್ (1623-1697) ತನ್ನ ಊರಿನ ಬೆಟ್ಟವನ್ನು ತನ್ನ ಕೃತಿಗಳಿಂದ ಇಡೀ ಚೀನದೇಶದಲ್ಲಿ ಪ್ರಸಿದ್ಧಗೊಳಿಸಿದ, ಇವನೂ ಸ್ವತಂತ್ರವಾದ ಶೈಲಿಯನ್ನು ಪ್ರವರ್ತಿಸಿದ.

ಕುಂಚಕ್ಕೆ ಬದಲಾಗಿ ಬೆರಳನ್ನೇ ಬಣ್ಣದಲ್ಲಿ ಅದ್ದಿ ಚಿತ್ರ ಬರೆಯುವ ಪದ್ಧತಿಯನ್ನು ಮೊದಲನೆಯ ಮಂಚು ಚಕ್ರವರ್ತಿಯೇ ಆರಂಭಿಸಿದಂತೆ. ಆದರೆ ಈ ವಿಚಿತ್ರ ಸಂವಿಧಾನವನ್ನು ಬಹುವಾಗಿ ಬಳಕೆಗೆ ತಂದವ ಕಓ-ಚ್‍ಇ-ಪ್‍ಐ (1672-1734). ಕುಂಚಕ್ಕೆ ಬದಲಾಗಿ ಕಮಲದ ದಂಟನ್ನು ಉಪಯೋಗಿಸುವ ಪ್ರಯೋಗವನ್ನೂ ಇವನು ಮಾಡಿದ್ದ. ಇವನೂ ಇವನ ಸೋದರಳಿಯ ಚು ಲುನ್-ಹಾನ್ ಎಂಬುವನೂ ಬೆರಳುಚಿತ್ರಣದಲ್ಲಿ ತುಂಬ ಸಾಧನೆಗಳನ್ನು ನಡೆಸಿ ಜನಪ್ರಿಯ ಸಂವಿಧಾನವೊಂದನ್ನು ಮಾಡಿದರು. ಈ ಶೈಲಿ ಮುಂದೆ ಕೋರಿಯ ಜಪಾನ್‍ಗಳಲ್ಲಿ ವಿಶೇಷವಾಗಿ ಹರಡಿತು. ಚೀನದಲ್ಲಿ ಅಷ್ಟು ಬಳಕೆಗೆ ಬರಲಿಲ್ಲ.

ಹೊಸಯುಗದ ವೈಶಿಷ್ಟ್ಯ ಹೊರಗಿನ ಕಲಾವಿದರ ಪ್ರಭಾವವನ್ನು ಅರಗಿಸಿಕೊಳ್ಳುವುದಾಗಿತ್ತು. ಚ್-ಇಎನ್ - ಲುಂಗ್ ಚಕ್ರವರ್ತಿಯ ಆಸ್ಥಾನದಲ್ಲಿ ಇಟಲಿ ದೇಶದವನಾದ ಗ್ಯುಸೆಪ್ ಕ್ಯಾಸ್ಟಿಗ್ಲಿಯೋನ್ (1788-1766) ಎಂಬುವನು ಪ್ರಸಿದ್ಧ ಕಲಾವಿದನಾಗಿದ್ದ. ಇವನ ಚೀನೀ ಹೆಸರು ಲಾಂಗ್ ಷಿ-ನಿಂಗ್ ಎಂದಿತ್ತು. ಚೀನೀ ಕಲಾವಿದರಿಗೂ ಐರೋಪ್ಯ ಕಲಾವಿದರಿಗೂ ಸಂಪರ್ಕ ಪೂರ್ವದಲ್ಲಿಯೇ ಇದ್ದಿತಾದರೂ ಈ ಇಟಲಿಯ ಕಲಾವಿದ ಜನಪ್ರಿಯನಾದ ಕಾರಣ ಈ ಸಂಪರ್ಕ ಪ್ರೌಢವಾಯಿತು. ಸಾರ್ಥಕವಾಯಿತು. ಇವನಿಗೆ ಆಶ್ರಯದಾತನಾದ ಚ್-ಇಎನ್-ಲುಂಗ್ ಚಕ್ರವರ್ತಿಯೂ (1736-1795) ಕಲಾಪಕ್ಷಪಾತಿಯಾಗಿದ್ದುದು ಮಾತ್ರವಲ್ಲದೆ ಉತ್ತಮ ಸಂಗ್ರಹಕನೂ ಸ್ವತಃ ಕಲಾವಿದನೂ ಆಗಿದ್ದ. ತನ್ನ ಸಂಗ್ರಹದಲ್ಲಿ ಸೇರಿದ ಕಲಾಕೃತಿಗಳ ಮೇಲೆ ಉದ್ದುದ್ದನೆಯ ಪದ್ಯಗಳನ್ನು ಬರೆಯುವ ಹವ್ಯಾಸ ಅವನಿಗಿತ್ತು.

ಯಾಂಗ್ ಚೌನ ಎಂಟು ವಿಚಿತ್ರವ್ಯಕ್ತಿಗಳು ಎಂದು ಹೆಸರಾಂತ ಕಲಾವಿದರಲ್ಲಿ ಚಿನ್-ನುಂಗ್ (1687-1764), ಚೆಂಗ್ ಹ್ಸಿಎ (1693-1765) ಲೋ ಪ್‍ಇಂಗ್ (1733-1799), ಹುಆ ಯೆನ್ (1682-1760) ಮತ್ತು ಹುಯಾಂಗ್ ಷೇನ್ (1687-1768) ಇವರು ಪ್ರಖ್ಯಾತರು. ಇವರಲ್ಲಿ ಚಿನ್-ನುಂಗ್‍ನ ಬರೆಹ ಸುಂದರ ಬೌದ್ಧಸೂತ್ರಗಳನ್ನು ಈತ ತನ್ನ ಕೈಬರೆಹದಲ್ಲಿ ಕಲಾಪೂರ್ಣವಾಗಿ ಬರೆದಿದ್ದಾನೆ. ಇವನ ಕಲಾಶೈಲಿಯೂ ಸ್ವತಂತ್ರವಾದ್ದು. ಈ ಎಂಟು ಮಂದಿ ಕಲಾವಿದರು ಹಲವಾರು ಶತಮಾನಗಳ ಚೀನೀ ಕಲೆಯ ಅಂತಿಮ ಘಟ್ಟವನ್ನು ಜಾಜ್ವಲ್ಯಮಾನವನ್ನಾಗಿ ಮಾಡಿದವರು. ಇವರ ಅನಂತರ ಸಾಂಪ್ರದಾಯಿಕ ಚೀನೀ ಕಲೆ ಕಳೆಗುಂದಿತು. ಪ್ರತಿಭಾಶಾಲಿಗಳಾದ ಕಲಾವಿದರು ಯಾರೂ ಕಾಣಿಸಿಕೊಳ್ಳಲಿಲ್ಲ.
ಒಟ್ಟಿನಲ್ಲಿ ಈ ಯುಗವು ಕಲಾದೃಷ್ಟಿಯಿಂದ ಉನ್ನತಿಯ ಯುಗ ಎನ್ನುವ ಹಾಗಿಲ್ಲ. ಕೈಕೆಲಸದ ಕಲೆಗೂ ಅವನತಿಯ ಚಿಹ್ನೆಯನ್ನು ತೋರಿಸತೊಡಗಿದುವು. ಪೋರ್ಸಲಿನ್(ಬಿಳಿಮಣ್ಣು) ಸಾಮಾನುಗಳನ್ನು ಅಧಿಕ ಪ್ರಮಾಣದಲ್ಲಿ ತಯಾರಿಸುವ ಉದ್ಯಮಗಳು ಮೈದಳೆದು ಕಲಾತ್ಮಕಸೃಷ್ಟಿ ಹಿಂದೆಬಿದ್ದಿತು. ರಫ್ತು ಮಾಡಲೆಂದೇ ಸಿದ್ಧವಾದ ಸಾಮಾಗ್ರಿಗಳಲ್ಲಿ ಕಲಾದೃಷ್ಟೀ ಊನವಾಗಿರುವುದು ಸಹಜವೇ. ಅದೂ ಅಲ್ಲದೆ ಬೇರೆ ಜನರ ಅಗತ್ಯ, ಸೌಕರ್ಯಗಳಿಗೆ ಅನುಗುಣವಾಗಿ ಕಲಾಕೃತಿಗಳನ್ನು ಸಿದ್ಧಮಾಡಬೇಕಾಗಿತ್ತು. ಈ ಕಾರಣದಿಂದಲೇ ಪೋರ್ಸಲಿನ್ ಸಾಮಾನುಗಳ ಮೇಲೆ ಕ್ರೈಸ್ತದೇವತೆಗಳ, ಸಂತರ ಚಿತ್ರಣ ಪ್ರಚುರವಾಯಿತು. ಚೀನೀ ಕಲಾವಿದರಿಗೆ ಸಹಜವಾದ, ಒಗ್ಗಿದ ಕಲ್ಪನೆಗಳು ಪರದೇಶದ ಕಲ್ಪನೆಗಳೊಂದಿಗೆ ಮಿಳಿತವಾಗಿ ಮಾರಾಟಕ್ಕೆಂದೇ ಕಲಾಕೃತಿಗಳು ಸಿದ್ಧವಾದದ್ದು ಈ ಅವನತಿಯುಗದ ವೈಶಿಷ್ಟ್ಯ. ಚೀನೀ ಕಲೆಯಲ್ಲಿ ನಾಗರ ಕಲೆಯ ಪ್ರಭಾವ ತುಂಬ ಇತ್ತು. ಈ ಶೈಲಿಯ ಪ್ರತಿಪಾದಕರು ತಮ್ಮ ಕಲೆ ರುಚಿಸಿದವರಿಗೆ ಮಾತ್ರ, ಅದು ಅರ್ಥವಾದವರಿಗೆ ಮಾತ್ರ ತಮ್ಮ ಕಲಾಕೃತಿಗಳನ್ನು ಕೊಡುತ್ತಿದ್ದರು; ಉಳಿದವರಿಗೆ ಎಷ್ಟು ಹಣಕ್ಕಾಗಲೀ ವಿಕ್ರಯ ಮಾಡುತ್ತಿರಲಿಲ್ಲ. ಇದು ಚೀನೀ ಕಲಾವಿದರ ಹೆಮ್ಮೆ. ಇದನ್ನು ದುರಭಿಮಾನ ಎಂದು ನಿಂದಿಸಿದ ವಿಮರ್ಶಕರೂ ಇದ್ದಾರೆ. ಆದರೆ ಇದು ಚೀನೀ ಕಲಾ ಸಂಪ್ರದಾಯದಲ್ಲಿ ಪ್ರಚಲಿತವಾದ ಮನೋಧರ್ಮ. ನಿ-ತ್ಸನ್ (1301-1374) ಎಂಬ ಅತಿ ಶ್ರೇಷ್ಠ ಚೀನೀ ಕಲಾವಿದರಲ್ಲಿ ಈ ಮನೋಧರ್ಮ ಪರಾಕಾಷ್ಟತೆಯನ್ನು ಮುಟ್ಟಿತು. ಅವರ ದೃಷ್ಟಿ ಈ ಮನೋಧರ್ಮವನ್ನು ಉಂಟುಮಾಡಿತ್ತು. ಚೀನೀ ಕಲಾವಿದರಿಗೆ ಕಲೆ ಸ್ವಾಂತಃಸುಖಾಯ. ಈ ಮನೋಧರ್ಮ ಆಧುನಿಕಯುಗದ ಅವತರಣಿಕೆಯಲ್ಲಿ ಮರೆಯಾಯಿತು. ಕಲೆ ಉದ್ಯಮಕ್ಕೆ ಅನುವರ್ತಿಯಾಗಿಯೇ ಇರಬೇಕೆಂಬ ಅಗತ್ಯ ಈ ಮಾರ್ಪಾಡಿಗೆ ಕಾರಣವಾಯಿತು. ಇದೇ ಚೀನೀ ಕಲೆಯ ಅವನತಿಗೂ ಕಾರಣವಾಯಿತು.

	ಲಲಿತಕಲೆಗೆ ಒದಗಿದ ಆತಂಕ ವಾಸ್ತುಶಿಲ್ಪದ ಅಭ್ಯುದಯಕ್ಕೆ ಎಡೆಮಾಡಿಕೊಟ್ಟಿತು. ಮಿಂಗ್ ರಾಜವಂಶದವರು ಭವ್ಯವಾದ ಸೌಧಗಳನ್ನೂ ಧರ್ಮ ಮಂದಿರಗಳನ್ನೂ ಅಲಂಕೃತ ಸಮಾಧಿಮಂದಿರಗಳನ್ನೂ ನಿರ್ಮಿಸುವುದರಲ್ಲಿ ತುಂಬ ಆಸಕ್ತಿಯನ್ನು ತೋರಿಸಿದ್ದರು. ಈ ಆಸಕ್ತಿಯ ಅಂಗವಾಗಿ ಶಿಲ್ಪ ಬೆಳೆದು ಬಂದಿತ್ತು. ಮಂಚು ಚಕ್ರವರ್ತಿಗಳೂ ಈ ಆಸಕ್ತಿಯನ್ನು ಇನ್ನಷ್ಟು ಬೆಳೆಸಿಕೊಂಡು ಬಂದರು. 1625ರಲ್ಲಿ ಅವರು ಮೂಕ್‍ಡೆನ್ ನಗರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಅಲ್ಲಿ ಭವ್ಯವಾದ ಕಟ್ಟಡಗಳನ್ನು ಕಟ್ಟಿಸಿದರು. ಇಲ್ಲಿನ ಅರಮನೆ ಕಲಾಪೂರ್ಣವಾದುದು. ತಮ್ಮ ರಾಜಧಾನಿಯನ್ನು ಪೀಕಿಂಗಿಗೆ ವರ್ಗಾಯಿಸಿದ ಅನಂತರ ಈ ನಿರ್ಮಾಣಕ್ರಿಯೆಗೆ ಪೀಕಿಂಗ್ ಕೇಂದ್ರವಾಯಿತು. ನಗರದ ಹೊರಗೆ ಗುಡ್ಡವೊಂದರ ಮೇಲೆ ಸುಂದರನಿಸರ್ಗದ ಹಿನ್ನೆಲೆಯಲ್ಲಿ ಕಟ್ಟಿಸಿದ ಪೈ-ಟ್‍ಆ (1654) ಸೊಗಸಾಗಿದೆ. ಹಳೆಯ ಮಂದಿರಗಳನ್ನೂ ನವ್ಯಶೈಲಿಯಲ್ಲಿ ಪುನನಿರ್ಮಾಣ ಮಾಡಿದರು. ಲ್ಹಾಸದಲ್ಲಿ ದಲಾಯ್ ಲಾಮನ ಪೋತಾಲಕ ಅರಮನೆಯ ಮಾದರಿಯಲ್ಲಿಯೇ ಪುತೋ-ತ್ಸುಂಗ್-ಚೆಂಗ್ ಭವನ ಮೈದಳೆಯಿತು. ಟಿಬೆಟ್ ಕಲೆಯನ್ನು ವಾಸ್ತುಶಿಲ್ಪದಲ್ಲಿ ಜೀರ್ಣಿಸಿಕೊಳ್ಳಲು ಚೀನೀಯರು ಪ್ರಯತ್ನಿಸಿದರು. ಬುದ್ಧಗಯಾದ ಮಹಾಬೋಧಿದೇವಾಲಯದ ಆದರ್ಶವನ್ನು ಹಿಡಿದು ವಿಹಾರದೇವಾಲಯಗಳು ಕಾಣಿಸಿಕೊಂಡವು. ಸ್ವರ್ಗದೇವಾಲಯವೆಂಬ ಸಂಕೀರ್ಣ ದೇವಾಲಯ 1896ರಲ್ಲಿ ಕಟ್ಟಲ್ಪಟ್ಟಿತು. ಇದು ಹಲವಾರು ಸಂಪ್ರದಾಯಗಳ ಸಮನ್ವಯವನ್ನು ಪ್ರತಿಬಿಂಬಿಸಿದೆ. ಮಂಚು ಚಕ್ರವರ್ತಿಗಳು ವಿದೇಶದ ಕಟ್ಟಡಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದರಾಗಿ ಆಯಾ ಶೈಲಿಗಳನ್ನು ತಮ್ಮ ಕಟ್ಟಡಗಳಲ್ಲಿಯೂ ಕಾಣಿಸಲು ಯತ್ನಿಸಿದರು. ಇದರಿಂದ ಚೀನೀ ಶೈಲಿಯ ಸಂಪತ್ತು ಹೆಚ್ಚಿತೆನ್ನುವ ಹಾಗಿಲ್ಲ. ಕೆಲವೊಮ್ಮೆ ವಿರುದ್ಧ ವಿವರಗಳು ಒಂದುಗೂಡಿ ಅವ್ಯವಸ್ಥೆಯ ಶೈಲಿ ರೂಪತಳೆಯಿತು. ಅಂತೂ ಪ್ರಯೋಜನವೇ ಪ್ರಮುಖವಾದ ಕಲಾಪ್ರಕಾರ ಈ ಯುಗದಲ್ಲಿ ಬೆಳೆಯಿತು. ಈ ದೃಷ್ಟಿ ಕಮ್ಯುನಿಸಂ ಆಡಳಿತದಲ್ಲಿ ಹೆಮ್ಮರವಾಗಿ ಬೆಳೆಯಿತು. ನೈಜವಾದ, ಶುದ್ಧವಾದ, ಮಾನವೀಯತೆಯ ಕಲೆ ತನ್ನ ತೌರೂರಾದ ಚೀನ ದೇಶದಿಂದ ಮರೆಯಾಯಿತು. ಇದು ಸಾಂಸ್ಕøತಿಕ ದೃಷ್ಟಿಯಿಂದ ದುರ್ದೈವದ ಸಂಗತಿ.			(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ